ಫಾಜಿಲ್ ಕೊಲೆಗಾಗಿಯೇ ಸುಹಾಸ್ ಶೆಟ್ಟಿ ಮರ್ಡರ್: ಸೋದರನಿಂದ ಸುಪಾರಿ!
Saturday, May 3, 2025
ಲೋಕಬಂಧು ನ್ಯೂಸ್
ಮಂಗಳೂರು: ರೌಡಿಶೀಟರ್ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತನಾಗಿದ್ದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಎರಡು ವರ್ಷದ ಹಿಂದೆ ಕೊಲೆಯಾದ ಫಾಜಿಲ್ ಈ ಕೃತ್ಯಕ್ಕೆ ಹಣಕಾಸು ನೆರವು ನೀಡಿರುವುದನ್ನು ಪತ್ತೆ ಮಾಡಿದ್ದಾರೆ.
ಬಜ್ಪೆ ಶಾಂತಿಗುಡ್ಡೆ ಅಬ್ದುಲ್ ಸಫ್ವಾನ್ (29), ನಿಯಾಜ್ (25), ಮಹಮ್ಮದ್ ಮುಸಮ್ಮಿರ್ (32), ಸುರತ್ಕಲ್ ಬಾಳ ನಿವಾಸಿಗಳಾದ ಕಲಂದರ್ ಶಾಫಿ ( 29) ಮತ್ತು ಆದಿಲ್ ಮೆಹರೂಫ್ (27), ಕಳಸ ಮಾವಿನಕೆರೆಯ ನಾಗರಾಜ್, ಜೋಕಟ್ಟೆ ನಿವಾಸಿ ಮಹಮ್ಮದ್ ರಿಜ್ವಾನ್ (28), ಕಳಸ ರುದ್ರಪಾದೆ ನಿವಾಸಿ ರಂಜಿತ್ (19) ಬಂಧಿತರು.
ಆರೋಪಿಗಳ ಪೈಕಿ ಅಬ್ದುಲ್ ಸಫ್ವಾನ್ ಮೇಲೆ ಈ ಹಿಂದೆ ಸುಹಾಸ್ ಶೆಟ್ಟಿ ಮತ್ತು ಸಹಚರರು ಒಂದು ವರ್ಷದ ಹಿಂದೆ ಹಲ್ಲೆ ನಡೆಸಿದ್ದರು. ಅಲ್ಲದೆ, ಸಫ್ವಾನ್ ನ್ನು ಕೊಲೆ ಮಾಡುವುದಾಗಿ ಸುಹಾಸ್ ಆನಂತರವೂ ಬೆದರಿಕೆ ಹಾಕಿದ್ದ. ಇದೇ ವಿಚಾರದಲ್ಲಿ ಸಫ್ವಾನ್ ಗೆ ಸುಹಾಸ್ ಮೇಲೆ ವೈಯಕ್ತಿಕ ದ್ವೇಷ ಇತ್ತು. ಇದೇ ವೇಳೆ, ಫಾಜಿಲ್ ಸೋದರ ಆದಿಲ್ ಮೆಹರೂಫ್ ತಾನು ಸುಹಾಸ್ ಶೆಟ್ಟಿ ಮುಗಿಸಲು ಹಣಕಾಸು ನೆರವು ನೀಡಿದ್ದ. ಪೊಲೀಸ್ ತನಿಖೆಯಲ್ಲಿ ಆದಿಲ್ ಆರೋಪಿಗಳಿಗೆ ಐದು ಲಕ್ಷ ನೀಡಿದ್ದಾನೆ ಎನ್ನುವುದು ಪತ್ತೆಯಾಗಿದೆ.
ಫಾಜಲ್ ಕೊಲೆಗೆ ಪ್ರತೀಕಾರ ಮತ್ತು ತನ್ನ ವೈಯಕ್ತಿಕ ದ್ವೇಷದಿಂದ ಅಬ್ದುಲ್ ಸಫ್ವಾನ್ ತನ್ನ ಸಂಗಡಿಗರ ಜೊತೆ ಸೇರಿ ಕೃತ್ಯ ಎಸಗಿದ್ದಾನೆ. ಅದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ನಾಗರಾಜ್ ಮತ್ತು ರಂಜಿತ್ ಸಹಕಾರ ನೀಡಿದ್ದಾರೆ. ಸದ್ಯಕ್ಕೆ ಕೃತ್ಯ ಎಸಗಿದ ಮತ್ತು ಸುಪಾರಿ ನೀಡಿದ ಒಟ್ಟು ಎಂಟು ಮಂದಿಯನ್ನು ಮಂಗಳೂರು ಸಿಸಿಬಿ ಎಸಿಪಿ ಮತ್ತು ಉತ್ತರ ವಿಭಾಗದ ಎಸಿಪಿ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ.