ಯಕ್ಷಗಾನ ಕಲಾವಿದ ಶ್ರೀಧರ ಕಾಸರಕೋಡು ನಿಧನ

ಲೋಕಬಂಧು ನ್ಯೂಸ್ ಉಡುಪಿ, ಜು.31
ಬಡಗು ತಿಟ್ಟಿನ ಪ್ರತಿಭಾನ್ವಿತ ಹಾಸ್ಯ ಕಲಾವಿದ ಕಾಸರಕೋಡು ಶ್ರೀಧರ ಸುಬ್ರಾಯ ಭಟ್ (51) ಅಲ್ಪ‌ಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.


ಕೆರೆಮನೆ ಶಿವರಾಮ ಹೆಗಡೆ ಮತ್ತು ದೊಡ್ಡತಂದೆ ನರಸಿಂಹ ಭಟ್ಟರಿಂದ ಪ್ರೇರಿತರಾಗಿ 26ರ ಹರೆಯದಲ್ಲೇ ಕೆರೆಮನೆ ಕೇಂದ್ರದಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗ ಅವರಲ್ಲಿ ಯಕ್ಷಗಾನ ಕಲಿತು, 18ನೇ ವಯಸ್ಸಿಗೆ ಮೇಳ ಸೇರಿ 33 ವರ್ಷ ಕಾಲ ಕಲಾಸೇವೆ‌ ಮಾಡಿದ್ದಾರೆ.


ಇಡಗುಂಜಿ, ಸಾಲಿಗ್ರಾಮ, ಮಂದಾರ್ತಿ , ಗುಂಡಬಾಳ ಮೇಳಗಳಲ್ಲಿ 13 ವರ್ಷಗಳ ತಿರುಗಾಟ ಮಾಡಿ ಮುಂದೆ ವಿವಿಧ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು.


ಯಾರ ಅನುಕರಣೆಯೂ ಇಲ್ಲದ ತುಂಬಾ ಚುರುಕಿನ ಮಾತು, ಕುಣಿತ, ಅಭಿನಯಗಳಿಂದ ಕಲಾರಸಿಕರಿಗೆ ಸಂತೋಷ ನೀಡುತ್ತಿದ್ದರು.


ಚಂದಗೋಪ, ರಜಕ, ನಂದಿಶೆಟ್ಟಿ, ಬೇಹಿನಚರ, ಅಜ್ಜಿ ಹೀಗೆ ಎಲ್ಲಾ ರೀತಿಯ ಪೌರಾಣಿಕ ಹಾಸ್ಯಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸುತ್ತಿದ್ದರು. ಅಸಾಧಾರಣ ಪ್ರತ್ಯುತ್ಪನ್ನಮತಿತ್ವ ಅವರದ್ದಾಗಿತ್ತು. ಚಂಡೆ ವಾದನದಲ್ಲೂ ಪರಿಣತರಾಗಿದ್ದರು.


ಶ್ರೀಧರ ಭಟ್ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.