ಜು.29: ಕಿದಿಯೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾರ್ಯಾರಂಭ

ಲೋಕಬಂಧು ನ್ಯೂಸ್ | ಉಡುಪಿ, ಜು.27
ನಗರದ ಕಿನ್ನಿಮೂಲ್ಕಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಿದಿಯೂರು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಜುಲೈ 29ರಿಂದ ಕಾರ್ಯಾರಂಭ ಮಾಡಲಿದೆ. ಅಂದು ಅಪರಾಹ್ನ 3.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೊಸೈಟಿಯನ್ನು ಉದ್ಘಾಟಿಸುವರು ಎಂದು ಸೊಸೈಟಿ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್, ಬೆಂಗಳೂರು ಎಂ.ಆರ್.ಜಿ. ಗ್ರೂಪ್ ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ ಶೆಟ್ಟಿ ಮತ್ತು ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಅಭ್ಯಾಗತರಾಗಿ ಆಗಮಿಸುವರು.
ವಿಶೇಷ ಆಹ್ವಾನಿತರಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬೃಜೇಶ್ ಚೌಟ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ಗುರ್ಮೆ ಸುರೇಶ ಶೆಟ್ಟಿ, ಕಿರಣ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಿರಿಯ ಸಹಕಾರಿ ಧುರೀಣ ಟಿ.ಶಂಭು ಶೆಟ್ಟಿ, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪಡುಬಿದ್ರಿ ಆಸ್ಪೆನ್ ಇನ್'ಫ್ರಾಸ್ಟ್ರಕ್ಚರ್ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು ಮತ್ತು ಶ್ರೀಪತಿ ಭಟ್ ಉಚ್ಚಿಲ, ಟೌನ್ ಕೋ-ಆಪರೇಟಿವ್ ಅಧ್ಯಕ್ಷ ಜಯಪ್ರಕಾಶ ಕೆದ್ಲಾಯ, ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಸದ್ಗುರು ಕೋ-ಆಪರೇಟಿವ್ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಅತಿಥಿಗಳಾಗಿ ಆಗಮಿಸುವರು


ಸಭಾ ಕಾರ್ಯಕ್ರಮ ಅಪರಾಹ್ನ 4 ಗಂಟೆಗೆ ಕಿನ್ನಿಮೂಲ್ಕಿ ಶ್ರೀ ವೀರಭದ್ರ ಸಭಾಂಗಣದಲ್ಲಿ ನಡೆಯಲಿದ್ದು, ಅದಕ್ಕೂ ಪೂರ್ವದಲ್ಲಿ 3.30ರಿಂದ ಯಕ್ಷ-ಗಾನ-ನಾದ ವೈಕುಂಠ ಕಾರ್ಯಕ್ರಮ ಕಲಾವಿದರಾದ ಚಿನ್ಮಯ ಭಟ್ ಕಲ್ಲಡ್ಕ, ಡಾ.ಪ್ರಖ್ಯಾತ್ ಶೆಟ್ಟಿ, ಭರತ್ ರಾಜ್ ಶೆಟ್ಟಿ, ಗುರುಪ್ರಸಾದ್ ಬೋಳಿಂಜಡ್ಕ ಮತ್ತು ಸ್ಕಂದ ಕೊನ್ನಾರ್ ಕೂಡುವಿಕೆಯಲ್ಲಿ ನಡೆಯಲಿದೆ ಎಂದು ಉದಯಕುಮಾರ್ ಶೆಟ್ಟಿ ವಿವರಿಸಿದರು.


ಪ್ರಸ್ತುತ 550 ಮಂದಿ ಸದಸ್ಯರನ್ನು ಹೊಂದಿರುವ ಸೊಸೈಟಿ ವಿವಿಧ ಠೇವಣಿ, ಸಾಲ ಸೌಲಭ್ಯ ಕಲ್ಪಿಸಲಿದೆ. ಮುಂದಿನ ದಿನಗಳಲ್ಲಿ ಅವಿಭಜಿತ ಜಿಲ್ಲೆ ಮಾತ್ರವಲ್ಲದೇ ರಾಜ್ಯ ಮಟ್ಟದಲ್ಲೂ ಶಾಖೆಗಳನ್ನು ತೆರೆಯುವ ಆಶಯ ಹೊಂದಲಾಗಿದೆ ಎಂದರು.


ಉದ್ಘಾಟನಾ ಕೊಡುಗೆಯಾಗಿ 1ರಿಂದ 2 ವರ್ಷಗಳ ವರೆಗಿನ ನಿರಖು ಠೇವಣಿಗೆ 11 ಶೇ. ಬಡ್ಡಿ ನೀಡಲಾಗುವುದು. ಈ ಯೋಜನೆ ಸೀಮಿತ ಅವಧಿಯದ್ದಾಗಿದ್ದು, ಜು.29ರಿಂದ ಒಂದು ತಿಂಗಳ ಕಾಲ ಚಾಲ್ತಿಯಲ್ಲಿರುತ್ತದೆ ಎಂದು ಉದಯ ಕುಮಾರ್ ಶೆಟ್ಟಿ ತಿಳಿಸಿದರು.


ಸೊಸೈಟಿ ಉಪಾಧ್ಯಕ್ಷೆ ಪ್ರಣೀತಾ ಶರತ್ ಶೆಟ್ಟಿ, ನಿರ್ದೇಶಕ ಸುಧಾಕರ ಹೆಗ್ಡೆ ಮತ್ತು ಕೆ.ಉಮೇಶ ನಾಯರಿ ಹಾಗೂ ಸಿಇಓ ಹರ್ಷಿತಾ ಸುದ್ದಿಗೋಷ್ಟಿಯಲ್ಲಿದ್ದರು.