'ರಂಗ ಪ್ರಸಂಗ'ಕ್ಕೆ ಅಂಬಾತನಯ ಮುದ್ರಾಡಿ ಪ್ರಶಸ್ತಿ

ಲೋಕಬಂಧು ನ್ಯೂಸ್ | ಉಡುಪಿ, ಆ.11
ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ಉಡುಪಿ ರಂಗಭೂಮಿ ನೀಡುವ ಪ್ರಸಕ್ತ ಸಾಲಿನ ವಾರ್ಷಿಕ ಪುಸ್ತಕ ಪ್ರಶಸ್ತಿಗೆ ರಂಗಕರ್ಮಿ ಗಣೇಶ ಅಮೀನಗಡ ಅವರ ಕೃತಿ ರಂಗ ಪ್ರಸಂಗ ಆಯ್ಕೆಯಾಗಿದೆ.
ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಪ್ರಾಯೋಜಕತ್ವದ ಈ ಪ್ರಶಸ್ತಿ 15 ಸಾವಿರ ರೂ. ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಒಳಗೊಂಡಿದೆ. ಸೆಪ್ಟಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.


ಸ್ವತಂತ್ರ, ಸೃಜನಶೀಲ ನಾಟಕ ಕೃತಿ ಮತ್ತು ಗಂಭೀರ ಚಿಂತನೆಯ ನಾಟಕೇತರ ಕೃತಿಗಳಿಗೆ ಪರ್ಯಾಯ ವರ್ಷಗಳಲ್ಲಿ ನೀಡಲಾಗುವ ಈ ಪ್ರಶಸ್ತಿ ಈ ವರ್ಷ ನಾಟಕೇತರ ಪುಸ್ತಕಕ್ಕೆ ಮೀಸಲಿತ್ತು. ಹಿಂದಿನ ಎರಡು ವರ್ಷ (2024- 2025)ಗಳಲ್ಲಿ ಪ್ರಕಟವಾದ ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.


ಪ್ರಶಸ್ತಿಗೆ ಆಯ್ಕೆಯಾದ ಗಣೇಶ ಅಮೀನಗಡ 'ರಂಗ ಪ್ರಸಂಗ' ಕೃತಿ ಅವರ ಸುದೀರ್ಘ ರಂಗಭೂಮಿ ಒಡನಾಟದ ದಾಖಲೆಯಂತಿದೆ. ಅದರ ಮೂಲಕ ಸಾಧ್ಯವಾಗುವ ತಿಳಿವಿನ ಹೊಳಹುಗಳನ್ನು ಗುರುತಿಸಿ, ತೀರ್ಪುಗಾರರ ಸಮಿತಿ ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸ್ಪರ್ಧೆ ಸಂಚಾಲಕ ಬೆಳಗೋಡು ರಮೇಶ ಭಟ್ ತಿಳಿಸಿದ್ದಾರೆ.