ಪರೀಕ ಸೌಖ್ಯವನ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗೆ ಎನ್ಎಬಿಎಚ್ ಮಾನ್ಯತೆ

ಲೋಕಬಂಧು ನ್ಯೂಸ್ | ಉಡುಪಿ, ಆ.22
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪರೀಕದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಸೌಖ್ಯವನದ ಅತ್ಯುನ್ನತ ಗುಣಮಟ್ಟದ ಸೇವೆಯನ್ನು ಗುರುತಿಸಿ ಆಸ್ಪತ್ರೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಎನ್ಎಬಿಎಚ್ ಪ್ರಮಾಣಪತ್ರ ಲಭಿಸಿದೆ.
ಪರೀಕ ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ್ ಪೂಜಾರಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಗುಣಮಟ್ಟ, ಆಸ್ಪತ್ರೆಯ ಸೌಕರ್ಯ, ವಾತಾವರಣ ಮೊದಲಾದ ಮಾನದಂಡಗಳ ಆಧಾರದಲ್ಲಿ ಈ ಮಾನ್ಯತಾ ಪತ್ರ ದೊರಕಿದೆ ಎಂದರು.
2007ರಲ್ಲಿ ಕೇವಲ 60 ಹಾಸಿಗೆಗಳೊಂದಿಗೆ ಆರಂಭಗೊಂಡ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ 2010ರಲ್ಲಿ 240 ಹಾಸಿಗೆಗಳಿಗೆ ಹಾಗೂ 2020-21ರಲ್ಲಿ 320 ಹಾಸಿಗೆಗಳ ಸುಸಜ್ಜಿತ ಹಾಗೂ ಅತ್ಯಾಧುನಿಕ ಕೇಂದ್ರವಾಗಿ ವಿಸ್ತರಣೆಗೊಂಡಿದೆ.


ಎನ್ಎಬಿಎಚ್ ಮಾನ್ಯತೆಗಾಗಿ 2023ರ ಆಗಸ್ಟ್'ನಿಂದ ಸಿದ್ಧತೆಗಳು ನಡೆದಿದ್ದವು. ಚಿಕಿತ್ಸಾ ವಿಭಾಗ, ನೈರ್ಮಲ್ಯ, ಪಥ್ಯಾಹಾರ, ವಾಯುಮಾಲಿನ್ಯ ನಿಯಂತ್ರಣ, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ವಿಭಾಗಗಳ ಪರಿಶೀಲನೆ ಬಳಿಕ 2026ರ ಮಾರ್ಚ್ 26 ಮತ್ತು 27ರಂದು ಎನ್ಎಬಿಎಚ್ ತಂಡದ ಡಾ.ಅಖಿಲೇಶ್, ಡಾ.ಜ್ಯೋತಿ ಹಾಗೂ ಡಾ.ನರೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಇದೀಗ ಎನ್ಎಬಿಎಚ್ ಪ್ರಮಾಣಪತ್ರ ಲಭಿಸಿದೆ ಎಂದರು.


ಪರೀಕ ಸೌಖ್ಯವನದ ಸ್ಥಾನಿಕ ವೈದ್ಯಾಧಿಕಾರಿ ಡಾ.ಶೋಭಿತ್ ಶೆಟ್ಟಿ ಮಾತನಾಡಿ, ಸೌಖ್ಯವನದಲ್ಲಿ ನುರಿತ ವೈದ್ಯರ ಸಮಾಲೋಚನೆಯೊಂದಿಗೆ ಜಲ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಎಣ್ಣೆ ಮಾಲಿಶ್, ಆಕ್ಯುಪಂಕ್ಚರ್ (ಸೂಜಿ ಚಿಕಿತ್ಸೆ), ಕಪ್ಪಿಂಗ್ ಥೆರಪಿ, ಫಿಸಿಯೋಥೆರಪಿ, ಯೋಗ ಚಿಕಿತ್ಸೆ ಹಾಗೂ ಪೌಷ್ಟಿಕಾಂಶಯುಕ್ತ ಸಾತ್ವಿಕ ಪಥ್ಯಾಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರರೋಗಿ ವಿಭಾಗದಲ್ಲೂ ಚಿಕಿತ್ಸೆ ಪಡೆಯಲು ಅವಕಾಶವಿದೆ. ಮಾನ್ಯತಾ ಮಂಡಳಿ ಪ್ರಮಾಣಪತ್ರದಿಂದ ಇನ್ನಷ್ಟು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು.


ಪರೀಕ ಸೌಖ್ಯವನದ ಮಹಿಳಾ ವೈದ್ಯಾಧಿಕಾರಿ ಡಾ.ಪೂಜಾ ಜಿ., ಫಿಸಿಯೋಥೆರಪಿಸ್ಟ್ ಡಾ.ಚೇತನಾ ಹಾಗೂ ಸೌಖ್ಯವನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಇದ್ದರು.