ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಗೆ ಸಹಬಾಳ್ವೆ ಖಂಡನೆ

ಲೋಕಬಂಧು ನ್ಯೂಸ್ | ಉಡುಪಿ, ಆ.21
ಕುಂದಾಪುರದ ಹೋಟೆಲ್‌ನಲ್ಲಿ ಪತ್ನಿ ಹಾಗೂ ಗೆಳೆಯರೊಂದಿಗೆ ಕುಳಿತಿದ್ದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಡಾ.ಮಹೇಂದ್ರ ಕುಮಾರ್ ಶೆಟ್ಟಿ ನಡೆಸಿದ ದೈಹಿಕ ಹಲ್ಲೆಯನ್ನು ಸಹಬಾಳ್ವೆ ‌ವೇದಿಕೆ ಖಂಡಿಸುತ್ತದೆ ಎಂದು ಪ್ರಧಾನ ಸಂಚಾಲಕ ಪ್ರೊ.ಕೆ.ಫಣಿರಾಜ್ ತಿಳಿಸಿದ್ದಾರೆ.
ಪತ್ರಕರ್ತ ಶ್ರೀಕಾಂತ್ ಅವರು ಕುಂದಾಪುರ ಸರಕಾರಿ ಅಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದರ ಸಂಬಂಧ ಮಹೇಂದ್ರ ಕುಮಾರ್ ಶೆಟ್ಟಿ ಹಲ್ಲೆ ನಡೆಸಿರುವುದಾಗಿ ದೂರು ದಾಖಲಾಗಿದೆ. ಪತ್ರಕರ್ತನಾಗಿ ಶ್ರೀಕಾಂತ್ ತನ್ನ ಜವಾಬ್ದಾರಿ ನಿಭಾಯಿಸಿರುವ ಕಾರಣಕ್ಕೆ ಹಲ್ಲೆ ನಡೆದಿರುವುದು ಆತಂಕಕಾರಿ ಸಂಗತಿ.


ಭ್ರಷ್ಟಾಚಾರ ಆರೋಪದ ಸತ್ಯಾಸತ್ಯತೆಗಳು ತನಿಖೆ, ಸಾಕ್ಷಿ ಪುರಾವೆಗಳಿಂದ ಸಾಂವಿಧಾನಿಕ ಕಾನೂನಿನನ್ವಯ ನಿರ್ಧಾರವಾಗಬೇಕು. ಅದರ ಹೊರತಾಗಿ ಸುಶಿಕ್ಷಿತ ವೈದ್ಯ ವೃತ್ತಿಯಲ್ಲಿರುವ ವ್ಯಕ್ತಿ ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡಿರುವುದು ನಿಜಕ್ಕೂ ಖಂಡನಾರ್ಹ.


ಅಧಿಕಾರಸ್ತರನ್ನು ಎದಿರು ಹಾಕಿಕೊಂಡು ಭ್ರಷ್ಟಾಚಾರ ಬಯಲಿಗೆ ಎಳೆಯುವುದು ಪತ್ರಿಕಾ ಧರ್ಮ. ಶ್ರೀಕಾಂತ್ ಅವರು ಆ ಉತ್ತರದಾಯಿತ್ವವನ್ನು ನಿಭಾಯಿಸಿದ್ದಕ್ಕಾಗಿ ಈ ರೀತಿ ಹಲ್ಲೆಗೆ ಒಳಗಾಗುವುದು ಬರೀ ಪತ್ರಕರ್ತರಿಗೆ ಸಂಬಂಧಿಸಿದ ಸಂಗತಿಯಲ್ಲ. ಇದು ಅಧಿಕಾರ ಹೊಂದಿದವರು, ತಮ್ಮ ಅಧಿಕಾರ ಬಲದಿಂದ ಸಾಮಾನ್ಯ ಜನರನ್ನು ನ್ಯಾಯಕ್ಕೆ ಆಗ್ರಹಿಸದ ಹಾಗೆ ಆಟಾಟೋಪದಿಂದ ದಮನ ಮಾಡುವ ಪ್ರವೃತ್ತಿಯ ಪ್ರದರ್ಶನ.


ಇದು ಕಾನೂನುಬದ್ಧ ನಾಗರಿಕ ಸಮಾಜದ ಶಾಂತಿಯುತ ಬದುಕಿಗೆ ಕೆಡಕು ಉಂಟು ಮಾಡುವ ವರ್ತನೆ. ಶಾಂತಿ, ಸೌಹಾರ್ದಯುತ ಸಮಾಜ ಜೀವನಕ್ಕಾಗಿ ದುಡಿಯುವ ಸಹಬಾಳ್ವೆ ವೇದಿಕೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತದೆ.


ಯಾವ ಅಧಿಕಾರ ಒತ್ತಡಕ್ಕೂ ಮಣಿಯದೇ ಹಲ್ಲೆ ನಡೆಸಿದ ಡಾ.ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸುವುದಾಗಿ ಕೆ.ಫಣಿರಾಜ್ ತಿಳಿಸಿದ್ದಾರೆ.