ಲೋಕಬಂಧು ನ್ಯೂಸ್ | ಮಣಿಪಾಲ, ಆ.11
ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಉಡುಪಿಯ ಹೆರ್ಗ ಗ್ರಾಮದ ಕೆಳಪರ್ಕಳ ಡೌನ್'ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಮೃತರನ್ನು ಆತ್ರಾಡಿ ನಿವಾಸಿ ಸನತ್ (21) ಎಂದು ಗುರುತಿಸಲಾಗಿದೆ.
ಮಣಿಪಾಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸನತ್ ತನ್ನ ಸ್ನೇಹಿತರೊಂದಿಗೆ ಮಣಿಪಾಲಕ್ಕೆ ಬಂದು ಊಟ ಮುಗಿಸಿ ರಾತ್ರಿ ಸುಮಾರು 1.25ಕ್ಕೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಸ್ನೇಹಿತನ ಬೈಕ್'ನಲ್ಲಿ ಸನತ್ ಮನೆಗೆ ತೆರಳುವುದಾಗಿ ಹೇಳಿ ಮಣಿಪಾಲದಿಂದ ಪರ್ಕಳದತ್ತ ಪ್ರಯಾಣ ಬೆಳೆಸಿದ್ದರು.
ರಾತ್ರಿ ಸುಮಾರು 1.35ರ ವೇಳೆಗೆ ಗೋಪಾಲಕೃಷ್ಣ ದೇವಸ್ಥಾನದ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೀರ ಬಲಭಾಗಕ್ಕೆ ತೆರಳಿ ಮರಕ್ಕೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆ ಬದಿಯ ಚರಂಡಿಗೆ ಸನತ್ ಎಸೆಯಲ್ಪಟ್ಟಿದ್ದು ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿತ್ತು.
ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಸನತ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
