-->
ಶಿಕ್ಷಕ ಪ್ರಶಸ್ತಿ ತಡೆ ಹಿಡಿದ ಸರ್ಕಾರದ ವಿರುದ್ಧ ಆಕ್ರೋಶ

ಶಿಕ್ಷಕ ಪ್ರಶಸ್ತಿ ತಡೆ ಹಿಡಿದ ಸರ್ಕಾರದ ವಿರುದ್ಧ ಆಕ್ರೋಶ

ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಕುಂದಾಪುರ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರಿಗೆ ನೀಡಿದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆಹಿಡಿದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ಹಾಗೂ ವಿವಿಧ ಮೋರ್ಚಾಗಳ ನೇತೃತ್ವದಲ್ಲಿ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ ತಡೆದು ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿದ್ಯೆ ಕಲಿಸಿದ ಗುರುಗಳಿಗೆ ಅವಮಾನ ಮಾಡುವ ಸರಕಾರದಿಂದ ರಾಜ್ಯದ ಜನತೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸರಕಾರದಿಂದ ಆಗುವ ಅನ್ಯಾಯಗಳ ವಿರುದ್ದ ಬಿಜೆಪಿ ಯುವ ಮೋರ್ಚಾ ಸಮರ್ಥವಾಗಿ ಹೋರಾಟ ಮಾಡುತ್ತಿದೆ. ಶಿಕ್ಷಕರಿಗೆ ನ್ಯಾಯ ದೊರಕುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಕ್ಷಕರಿಗೆ ಅವಮಾನ ಮಾಡಿ ಕಾಂಗ್ರೆಸ್ ದಾಖಲೆ ಸೃಷ್ಟಿಸಿದೆ. ಶಾಲಾ ಸಮವಸ್ತ್ರ ಹೊರತುಪಡಿಸಿ ಯಾವುದೇ ಧರ್ಮಕ್ಕೆ ಸಂಬಂಧಿಸಿ ವಸ್ತ್ರ, ಹಿಜಾಬ್ ಧರಿಸಬಾರದು ಎಂಬ ಹೈಕೋರ್ಟ್ ಆದೇಶವನ್ನು ಅಂದಿನ ಸರಕಾರ ಪಾಲಿಸಿದೆ. ಸರಕಾರದ ಆದೇಶವನ್ನು ಪ್ರಾಂಶುಪಾಲರು ಪಾಲಿಸಿದ್ದಾರೆ. ಈ ಘಟನೆಯನ್ನು ಇಟ್ಟುಕೊಂಡು ದ್ವೇಷ ಸಾಧಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದರು.


ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರವೇ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿ, ಏಕಾಏಕಿ ಆದೇಶವನ್ನು ತಡೆಹಿಡಿದಿರುವುದು ಏಕೆ ಎಂದು ಉತ್ತರಿಸಬೇಕು. ಜಿಲ್ಲೆಯ ಐದು ಶಾಸಕರು ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು, ಖುದ್ದು ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಕಾಪು ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಮಾಜಿ ಅಧ್ಯಕ್ಷೆ ವೀಣಾ ಶೆಟ್ಟಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ವಿಜಯ್ ಕೊಡವೂರು, ಕುಂದಾಪುರ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ವಿಭಾಗ ಸಹ ಪ್ರಭಾರಿ ರಾಜೇಶ್ ಕಾವೇರಿ, ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article