-->
ಮಲ್ಪೆಯಲ್ಲಿ ಬಾಂಬ್ ಸ್ಫೋಟ, ಐವರು ಗಂಭೀರ..!

ಮಲ್ಪೆಯಲ್ಲಿ ಬಾಂಬ್ ಸ್ಫೋಟ, ಐವರು ಗಂಭೀರ..!

ಲೋಕಬಂಧು ನ್ಯೂಸ್
ಉಡುಪಿ: ಭಾರತ- ಪಾಕಿಸ್ತಾನ ಯುದ್ದ ಭೀತಿಯ ನಡುವೆಯೇ ಮಲ್ಪೆ ಬಂದರಿನಲ್ಲಿ ಮಂಗಳವಾರ ಸಂಜೆ ಬಾಂಬ್ ಸ್ಪೋಟಗೊಂಡು ಐವರು ಗಂಭೀರ ಗಾಯಗೊಂಡಿದ್ದಾರೆ!
ಸಂಜೆ ಸುಮಾರು 4.30ಕ್ಕೆ ಪ್ರಶಾಂತವಾಗಿದ್ದ ಕಡಲಿನ ನಡುವೆ ತಣ್ಣಗೆ ಮೈಹೊದ್ದು ಕುಳಿತಿದ್ದ ಮೀನುಗಾರರಿಗೆ ಒಮ್ಮೆಲೇ ದೊಡ್ಡ ಸದ್ದು ಕೇಳಿ, ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಗಾಬರಿಯಿಂದ ಓಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ಗಾಯಗೊಂಡ ಐವರು ಮೀನುಗಾರರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು!!


ಇದು ನಿಜ ಘಟನೆ ಅಲ್ಲ.


ಸಂಭಾವ್ಯ ಆತಂಕದ ಹಿನ್ನೆಲೆಯಲ್ಲಿ ನಡೆದ ಅಣಕು ಪ್ರದರ್ಶನ.
ಮಲ್ಪೆ ಮೀನುಗಾರರ ಸಂಘ, ಕರಾವಳಿ ಕಾವಲು ಪಡೆ, ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ಅಗ್ನಿಶಾಮಕ ದಳ ಮತ್ತು ಕಸ್ಟಮ್ಸ್ ಇಲಾಖೆ ಸಂಯುಕ್ತವಾಗಿ ಮಲ್ಪೆ ಬಂದರಿನಲ್ಲಿ ಅಣಕು ಕಾರ್ಯಾಚರಣೆ ನಡೆಸಿದವು.
ಅಗ್ನಿಶಾಮಕ ವಾಹನ ಸೈರನ್ ಮೊಳಗಿಸುತ್ತಾ ಬಂದರಿಗೆ ಬಂದು ತಾತ್ಕಾಲಿಕ ಬೆಂಕಿ ನಂದಿಸಿ, ಗಾಯಗೊಂಡವರನ್ನು ರಕ್ಷಿಸುವ ಅಣಕು ಕಾರ್ಯಾಚರಣೆ ಮಾಡಲಾಯಿತು. ನಂತರ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್, ಅಧಿಕಾರಿಗಳು ಹಾಗೂ ಮೀನುಗಾರರಿಗೆ ಕಾರ್ಯಾಚರಣೆಯ ಮಹತ್ವ ವಿವರಿಸಿದರು.


ಸಮುದ್ರದಲ್ಲಿ ಗಸ್ತು
ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಬೋಟ್ ನಲ್ಲಿ ಶಸ್ತ್ರಸಜ್ಜಿತರಾಗಿ ಬಂದರಿನ ಸುತ್ತಲೂ ಗಸ್ತು ತಿರುಗುವ ಮೂಲಕ ವಿಶೇಷ ಸನ್ನಿವೇಶದಲ್ಲಿ ಇಲಾಖೆಯ ಕಾರ್ಯದ ಬಗ್ಗೆ ಅರಿವು ಮೂಡಿಸಿದರು.
ಕರಾವಳಿ ಕಾವಲು ಪಡೆ ಪೋಲಿಸ್ ನಿರೀಕ್ಷಕ ಪ್ರಮೋದ್, ಸೀತಾರಾಮ, ಪಿಎಸ್ಐ ಫೆಮಿನಾ ಮೊದಲಾದ ಅಧಿಕಾರಿಗಳು ಹಾಜರಿದ್ದರು.



ಕರ್ನಾಟಕದ 12 ಪ್ರಮುಖ ಬಂದರಿನಲ್ಲಿ ಮಲ್ಪೆ ಬಂದರು ಪ್ರಮುಖವಾಗಿದೆ. ಅತೀ ಹೆಚ್ಚು ಮೀನುಗಾರಿಕೆ ಚಟುವಟಿಕೆ ನಡೆಯುವ ಬಂದರು ಇದಾಗಿದ್ದು, ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಅಣಕು ಕಾರ್ಯಾಚರಣೆ ಮಾಡಲಾಗಿದೆ.


ಮೀನುಗಾರರು 3 ಬೋಟ್ ಗಳೊಂದಿಗೆ ಒಟ್ಟಿಗೆ ಮೀನುಗಾರಿಕೆಗೆ ತೆರಳಬೇಕು. ಸೂಕ್ಷ್ಮ ಪ್ರದೇಶಗಳಿಗೆ ಮೀನುಗಾರಿಕೆಗೆ ತೆರಳುವಾಗ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ ಎಂದು ಕರಾವಳಿ ಕಾವಲು  ಪಡೆ ಎಸ್ಪಿ ಮಿಥುನ್ ತಿಳಿಸಿದರು.

Ads on article

Advertise in articles 1

advertising articles 2

Advertise under the article