
ಭುವಿಗಿಳಿದ ಗಗನಯಾತ್ರಿಗಳ ಸಾಧನೆಗೆ ಸಂಭ್ರಮಾಚರಣೆ
Thursday, March 20, 2025
ಲೋಕಬಂಧು ನ್ಯೂಸ್
ಉಡುಪಿ: ಸ್ಪೇಸ್ ಸ್ಟೇಷನ್'ನಲ್ಲಿ ನಿಗದಿಯಾದ ಎಂಟು ದಿನದ ಬದಲು 286 ದಿನ ಉಳಿದು ಹರಸಾಹಸ ಪಟ್ಟು ಭೂಮಿಗೆ ವಾಪಸಾದ ಹಿರಿಯ ವಿಜ್ಞಾನಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸಾಧನೆಗೆ ಗುರುವಾರ ಅಭಿನಂದನೆ ಸಲ್ಲಿಸಲಾಯಿತು.
ಸಮಾಜ ಸೇವಕ ಹಾಗೂ ಸಂಸ್ಥೆ ಸಂಚಾಲಕ ನಿತ್ಯಾನಂದ ಒಳಕಾಡು ಕಾರ್ಯಕ್ರಮ ಆಯೋಜಿಸಿದ್ದು ಅನೇಕ ವಿದ್ಯಾರ್ಥಿನಿಯರು ಸುನೀತಾ ವಿಲಿಯಮ್ಸ್ ಭಾವಚಿತ್ರ ಹಿಡಿದು ಶುಭ ಕೋರಿದರು.
ಕಾಲೇಜಿನ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಾಧನೆಯನ್ನು ಸಂಭ್ರಮಿಸಲಾಯಿತು.
ಹಿರಿಯ ಭೌತಶಾಸ್ತ್ರಜ್ಞ, ಪ್ರೊ. ಎ.ಪಿ. ಭಟ್ ಈ ಸಂದರ್ಭದಲ್ಲಿ ಗಗನಯಾತ್ರೆಯ ಸಾಹಸ ಮತ್ತು ತಾಂತ್ರಿಕ ಸಮಸ್ಯೆಯಿಂದ ವಿಜ್ಞಾನಿಗಳಿಗಾದ ತೊಂದರೆಗಳ ಬಗ್ಗೆ ಮತ್ತು ಅಮೆರಿಕ ನಾಸಾ ಸಂಸ್ಥೆ ಇಬ್ಬರೂ ವಿಜ್ಞಾನಿಗಳನ್ನು ಸುರಕ್ಷಿತವಾಗಿ ವಾಪಾಸು ಕರೆತಂದ ಬಗ್ಗೆ ಮಾಹಿತಿ ನೀಡಿದರು.
ಆತಂಕಕಾರಿ ಆಕಾಶ ವಾಸ ನಡೆಸಿದ ಇಬ್ಬರೂ ವಿಜ್ಞಾನಿಗಳು ಭೂಮಿಗೆ ತಲುಪಿದ್ದಾರೆ. ಪ್ರಪಂಚದಾದ್ಯಂತ ಈ ಬೆಳವಣಿಗೆಯನ್ನು ಜನ ಸಂಭ್ರಮಿಸುತ್ತಿದ್ದಾರೆ. ನಾಸಾದಿಂದ ತೆರಳಿದ ಇಬ್ಬರು ಋಷಿಗಳು ಮತ್ತೆ ಭೂಮಿ ತಲುಪಿದ್ದಾರೆ.
ಮಾನಸಿಕ ದೈಹಿಕ ಮತ್ತು ಭೌತಿಕ ತಪಸ್ಸಿನಿಂದ ಈ ಸಾಧನೆ ಸಾಧ್ಯವಾಗಿದೆ. ಕೋಟಿ ಕೋಟಿ ಖರ್ಚು ಮಾಡಿ ಎರಡು ಜೀವಗಳನ್ನು ಉಳಿಸಿದ್ದು ದೊಡ್ಡ ಮಾನವೀಯತೆ. ಪ್ರಪಂಚದಲ್ಲಿ ಮಾನವೀಯತೆ ಉಳಿದಿದೆ, ಮೆರೆದಿದೆ ಎಂದರು.
ಜೀರೋ ಗ್ರ್ಯಾವಿಟಿಯಲ್ಲಿ ಬದುಕಿ ಬಂದಿರುವುದು ಸಾಮಾನ್ಯ ಬೆಳವಣಿಗೆಯಲ್ಲ. ಸುನೀತಾ ಅವರಿಗೆ ಭಗವದ್ಗೀತೆ, ಉಪನಿಷತ್ತು ಸಮಗ್ರ ಜ್ಞಾನ ವೃದ್ಧಿಗೆ ಕಾರಣವಾಯಿತು.
ಈ ಕ್ಷಣದಲ್ಲಿ ಕಲ್ಪನಾ ಚಾವ್ಲಾ ನೆನಪಾಗುತ್ತಾರೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದರೂ ಪ್ರಪಂಚಕ್ಕೆ ಆತಂಕ ಇದ್ದೇ ಇತ್ತು. ಪ್ರಧಾನಿ ಮೋದಿ ಸಾಧಕ ವಿಜ್ಞಾನಿಗಳನ್ನು ಭಾರತಕ್ಕೆ ಸ್ವಾಗತಿಸಿದ್ದು, ವಿಜ್ಞಾನದ ಅಧ್ಯಯನದಲ್ಲಿ ದೇಶಕ್ಕೆ ಪ್ರಪಂಚಕ್ಕೆ ಇವರಿಬ್ಬರು ಹೊಸ ಆದರ್ಶ ಎಂದು ಬಣ್ಣಿಸಿದರು.
ಕಾಲೇಜಿನ ಸಂಸ್ಥಾಪಕ ಖ್ಯಾತ ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು, ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್, ಧಾರ್ಮಿಕ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಡಾ. ಗೌರಿ ಪ್ರಭು, ಸಚಿನ್ ಶೇಟ್, ತಾರಾ ಶ್ರೀಧರ್, ದಯಾನಂದ್ ಮೊದಲಾದವರಿದ್ದರು.