
ಮಲ್ಪೆ ಘಟನೆಯಿಂದ ಜಿಲ್ಲೆಗೆ ಅವಮಾನ
Thursday, March 20, 2025
ಲೋಕಬಂಧು ನ್ಯೂಸ್
ಕಾಪು: ಪ್ರಖ್ಯಾತ ಪ್ರವಾಸೋದ್ಯಮ ತಾಣವಾಗಿರುವ ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಘಟನೆಯನ್ನು ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಗಿರೀಶ್ ಗುಡ್ಡೆಯ0ಗಡಿ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆ ಉಡುಪಿ ಜಿಲ್ಲೆಗೇ ಅವಮಾನ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮಾತ್ರವಲ್ಲದೇ ದೇಶ ವಿದೇಶಗಳಿಂದ ಮಲ್ಪೆ ಪ್ರವಾಸೋದ್ಯಮ ತಾಣಕ್ಕೆ ದಿನಂಪ್ರತಿ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಇಂಥ ಸಮಯದಲ್ಲಿಯೇ ಮಲ್ಪೆಯಲ್ಲಿ ಈ ದುರ್ಘಟನೆ ನಡೆದಿರುವುದು ಅತ್ಯಂತ ಕಳವಳಕಾರಿ ಮತ್ತು ನೋವಿನ ಸಂಗತಿ.
ದೂರದ ಊರಿನಿಂದ ಉದ್ಯೋಗ ಆರಸಿ ಬಂದಿರುವ ಈ ಮಹಿಳೆಗೆ ಮಾನವೀಯತೆ ಮರೆತು ಮೃಗಗಳಂತೆ ಹಲ್ಲೆ ಮಾಡಿದ್ದಾರೆ. ಸುಶಿಕ್ಷಿತರಾದ ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ.
ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.