
ದೈಹಿಕ ಮಾನಸಿಕ ಸ್ವಾಸ್ಥ್ಯ ಸತ್ಕಾರ್ಯಕ್ಕೆ ಪೂರಕ
Thursday, March 6, 2025
ಲೋಕಬಂಧು ನ್ಯೂಸ್
ಹಿರಿಯಡಕ: ಮನುಷ್ಯರೆಲ್ಲರೂ ಬಯಸುವುದು ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ. ಅದಿದ್ದರೆ ಮಾತ್ರ ಸತ್ಕಾರ್ಯಗಳನ್ನು ಮಾಡಬಹುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪರೀಕ ಸೌಖ್ಯವನ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಳದಲ್ಲಿ ಗುರುವಾರ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸುವ ದೀರ್ಘಾಯುಷ್ಯಕ್ಕೆ ಉತ್ತಮ ಆರೋಗ್ಯ ಇದ್ದರೆ ಮಾತ್ರ ಪ್ರಯೋಜನ, ಆರೋಗ್ಯ ಸರಿ ಇಲ್ಲದಿದ್ದಲ್ಲಿ ದೀರ್ಘಾಯುಷ್ಯ ಹೊರೆಯಾಗಲಿದೆ ಎಂದರು.
ಆಂಜನೇಯನ ಪ್ರೇರಣೆ!
ಆಂಜನೇಯನ ಪ್ರೇರಣೆಯಿಂದ ನಾರಾಯಣ ರಾಯರಿಂದ ದಾನಪತ್ರ ಮೂಲಕ ಶ್ರೀಕ್ಷೇತ್ರಕ್ಕೆ ಬಂದ ಈ ಸ್ಥಳದಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ ಸೌಖ್ಯವನ ಆರಂಭಿಸಿ, ಆರೋಗ್ಯ ವರ್ಧನ ಕೇಂದ್ರವಾಗಿ ಮಾಡಲಾಗುತ್ತಿದೆ. ಮಾನವನ ಅಂಗಾಂಗಗಳಿಗೆ ಶಕ್ತಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾಮರಸ್ಯದ ಕೇಂದ್ರ
ಸಾನ್ನಿಧ್ಯ ವಹಿಸಿದ್ದ ಶ್ರೀ ಶಂಕರಾಚಾರ್ಯ ಪರಂಪರೆಯ ಕಾಸರಗೋಡು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಭೌತಿಕ ಮತ್ತು ಪಾರಮಾರ್ಥಿಕ ಶಕ್ತಿ ಭಗವಂತ. ಧರ್ಮ, ದೇವರ ಹೆಸರಿನಲ್ಲಿ ಕಚ್ಚಾಡುತ್ತಿದ್ದ ಸಂದರ್ಭದಲ್ಲಿ ಅವತರಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರು ಪಂಚಾಯತನ ಪೂಜಾ ಕ್ರಮದ ಮೂಲಕ ಆರಾಧನೆಯಲ್ಲಿ ಸಮಾನತೆಯನ್ನು ತಂದರು. ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಸಾಮರಸ್ಯ ಸ್ಥಾಪಿಸಿದರು. ದೇವಾಲಯಗಳು ಸಾಮರಸ್ಯದ ಕೇಂದ್ರಗಳಾಗಬೇಕು. ಅದು ಪರೀಕರಲ್ಲಿ ಸಾಕಾರಗೊಂಡಿದೆ ಎಂದರು.
ಮಕ್ಕಳ ಸಹಿತ ಎಲ್ಲರೂ ದೇವಾಲಯಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದವರು ಸಲಹೆ ನೀಡಿದರು.
ನೆಮ್ಮದಿಗಾಗಿ ಉತ್ಸವ
ಮನುಷ್ಯನ ನೆಮ್ಮದಿಗೆ ಜಾತ್ರೆ, ಉತ್ಸವ ಆಯೋಜಿಸಲಾಗುತ್ತದೆ. ದೇವಾಲಯಗಳು ನೆಮ್ಮದಿ ನೀಡುವ ಕೇಂದ್ರಗಳಾಗಿದ್ದು, ಇಲ್ಲಿ ಭಿನ್ನತೆ ಬಂದಾಗ ಅಷ್ಟಬಂಧದಂಥ ಪ್ರಕ್ರಿಯೆಗಳ ಮೂಲಕ ಬ್ರಹ್ಮಕುಂಭಾಭಿಷೇಕ ನಡೆಸಲಾಗುತ್ತದೆ ಎಂದು ಸಾನ್ನಿಧ್ಯ ವಹಿಸಿದ್ದ ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ತಿಳಿಸಿದರು.
ಕ್ಷೇತ್ರದ ತಂತ್ರಿಗಳಾದ ಜಯರಾಮ ತಂತ್ರಿ, ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಮೊದಲಾದವರಿದ್ದರು.
ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ಸ್ವಾಗತಿಸಿ, ಸುಬ್ರಹ್ಮಣ್ಯ ಪ್ರಸಾದ್ ಧರ್ಮಸ್ಥಳ ನಿರೂಪಿಸಿದರು. ಸೌಖ್ಯವನ ವ್ಯವಸ್ಥಾಪಕ ಪ್ರವೀಣ ಕುಮಾರ್, ವೈದ್ಯಾಧಿಕಾರಿಗಳಾದ ಡಾ.ಗೋಪಾಲ ಪೂಜಾರಿ, ಡಾ. ಶೋಭಿತ್ ಶೆಟ್ಟಿ, ಡಾ.ಪೂಜಾ ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುದ್ರೋಳಿ ಗಣೇಶ್ ತಂಡದವರಿಂದ ಜಾದೂ ನಡೆಯಿತು.
ಕುಂಭಾಭಿಷೇಕ
ಬೆಳಿಗ್ಗೆ 7.37ರ ಮೀನಲಗ್ನ ಸುಮುಹೂರ್ತದಲ್ಲಿ ಅಷ್ಟಬಂಧ ಸ್ಥಾಪನೆ ಬಳಿಕ 11 ಗಂಟೆಗೆ ವೃಷಭ ಲಗ್ನದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಿತು. ಡಾ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ದಂಪತಿ, ಡಿ.ಹರ್ಷೇಂದ್ರಕುಮಾರ್ ಮತ್ತು ಸುಪ್ರಿಯಾ ದಂಪತಿ ಹಾಗೂ ಮನೆಯವರು ಮೊದಲಾದವರಿದ್ದರು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕ್ಷೇತ್ರಕ್ಕೆ ಭೇಟಿ ನೀಡಿದರು.