-->
ಎಲ್ಲೆಲ್ಲಿ, ಯಾರಿಂದ ತಪ್ತ ಮುದ್ರಾಧಾರಣೆ

ಎಲ್ಲೆಲ್ಲಿ, ಯಾರಿಂದ ತಪ್ತ ಮುದ್ರಾಧಾರಣೆ

ಲೋಕನಂಧು ನ್ಯೂಸ್, ಉಡುಪಿ
ವೈಷ್ಣವ ಪರಂಪರೆಯಲ್ಲಿ ವಿಷ್ಣು ಭಕ್ತಿಯ ದ್ಯೋತಕವಾಗಿ ಯತಿಗಳಿಂದ ನಡೆಸಲ್ಪಡುವ ಧಾರ್ಮಿಕ ವಿಧಿ ತಪ್ತ ಮುದ್ರಾಧಾರಣೆ. 
ಹೋಮಾಗ್ನಿಯಲ್ಲಿ ಕಾಯಿಸಿದ ವಿಷ್ಣುವಲಾಂಛನವಾದ ಶಂಖ ಚಕ್ರ ಗದೆ ಮತ್ತು ಪದ್ಮ ಮುದ್ರೆಗಳನ್ನು ಪುರುಷರ ಎದೆ ಮತ್ತು ತೋಳುಗಳಿಗೆ ಹಾಗೂ ಮಹಿಳೆಯರ ತೋಳುಗಳಿಗೆ ಹಾಕಲಾಗುತ್ತದೆ.
ಭಗವದನುಗ್ರಹದ ಜೊತೆಗೆ   ರೋಗ ನಿರೋಧಕವಾಗಿ ಮುದ್ರಾಧಾರಣೆ ಮಾಡಲಾಗುತ್ತದೆ ಎಂಬುದು ವೈಷ್ಣವರ ಪರಂಪರಾಗತ ನಂಬಿಕೆ.


ವಿವಿಧ ಏಕಾದಶಿಗಳಂದು ಇದನ್ನು ನಡೆಸಲಾಗುತ್ತದೆಯಾದರೂ ಆಷಾಢ ಶುಕ್ಲ ಏಕಾದಶಿ (ಪ್ರಥಮೈಕಾದಶಿ)ಯಂದು ನಡೆಸುವ ಮುದ್ರಾಧಾರಣೆಗೆ ವಿಶೇಷತೆ ಇದೆ.


ಜುಲೈ 6ರಂದು ಭಾನುವಾರ ನಡೆಯುವ ಮುದ್ರಾಧಾರಣೆಯನ್ನು ವಿವಿಧ ಯತಿಗಳು ವಿವಿಧೆಡೆ ನಡೆಸಲಿದ್ದಾರೆ.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ ನಡೆಸುವರು.
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉಡುಪಿ ರಥಬೀದಿಯ ಕೃಷ್ಣಾಪುರ ಮಠದಲ್ಲಿ ತಪ್ತ ಮುದ್ರಾಧಾರಣೆ ಮಾಡುವರು.
ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಬೆಳಿಗ್ಗೆ 5ರಿಂದ 6ರ ವರೆಗೆ ಬೆಂಗಳೂರು ಮಲ್ಲೇಶ್ವರಂ ಪಲಿಮಾರು ಮಠದಲ್ಲಿ, 7.30ರಿಂದ 8.30ರ ವರೆಗೆ ಮಂಡ್ಯ ಸುಭಾಸ್ ನಗರದ ಶ್ರೀ ವ್ಯಾಸರಾಜ ಮಠದಲ್ಲಿ, 9.30ರಿಂದ 11ರ ವರೆಗೆ ಮೈಸೂರು ಶಿವರಾಮಪೇಟೆ ಶ್ರೀಕೃಷ್ಣ ಮಂದಿರದಲ್ಲಿ, 11.30ರಿಂದ ಮೈಸೂರು ಸರಸ್ವತಿಪುರಂ ಶ್ರೀಕೃಷ್ಣಧಾಮದಲ್ಲಿ
ಸಂಜೆ 5ರಿಂದ 6ರ ವರೆಗೆ ಮೈಸೂರು ಕೆ.ಆರ್.ನಗರ ಶ್ರೀಕೃಷ್ಣ ಮಂದಿರದಲ್ಲಿ ಹಾಗೂ ಸಂಜೆ 7ರಿಂದ 8ರ ವರೆಗೆ ಮೈಸೂರು ವಿಠಲಧಾಮದಲ್ಲಿ ತಪ್ತ ಮುದ್ರಾಧಾರಣೆ ನಡೆಸುವರು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಹಾಗೂ ಸಂಜೆ 7ರಿಂದ ಚೆನ್ನೈನಲ್ಲಿ ಮುದ್ರಾಧಾರಣೆ ನಡೆಸುವರು.
ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬಳ್ಳಾರಿ ಶ್ರೀ ರಾಘವೇಂದ್ರ ಮಠದಲ್ಲಿ
ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಬೆಂಗಳೂರು ಸದಾಶಿವ ನಗರ ಈಶಾವಾಸ್ಯಂನಲ್ಲಿ ತಪ್ತ ಮುದ್ರಾಧಾರಣೆ ನಡೆಸುವರು.
ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉಡುಪಿ ರಥಬೀದಿಯ ಕಾಣಿಯೂರು ಮಠದಲ್ಲಿ ತಪ್ತ ಮುದ್ರಾಧಾರಣೆ ನಡೆಸುವರು.
ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಬೆಳಿಗ್ಗೆ 7ರಿಂದ ಅಪರಾಹ್ನ 1ರ ವರೆಗೆ ಬೆಂಗಳೂರು ಶಂಕರಪುರ ಶ್ರೀಕೃಷ್ಣ ವಾದಿರಾಜ ಮಂದಿರದಲ್ಲಿ ತಪ್ತ ಮುದ್ರಾಧಾರಣೆ ನಡೆಸುವರು.
ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬೆಳಿಗ್ಗೆ 8.30ರಿಂದ ಉಡುಪಿ ರಥಬೀದಿಯ ಶೀರೂರು ಮಠದಲ್ಲಿ ಮುದ್ರಾಧಾರಣೆ ನಡೆಸುವರು.

Ads on article

Advertise in articles 1

advertising articles 2

Advertise under the article