-->
ಶೀರೂರು ಪರ್ಯಾಯ ಪೂರ್ವ ಅಕ್ಕಿ ಮುಹೂರ್ತ ಸಂಪನ್ನ

ಶೀರೂರು ಪರ್ಯಾಯ ಪೂರ್ವ ಅಕ್ಕಿ ಮುಹೂರ್ತ ಸಂಪನ್ನ

ಲೋಕಬಂಧು ನ್ಯೂಸ್
ಉಡುಪಿ: ಭಾವಿ ಪರ್ಯಾಯ ಶೀರೂರು ಮಠದ ಪರ್ಯಾಯ ಪೂರ್ವ ವಿಧಿಗಳಲ್ಲಿ ಎರಡನೆಯದಾದ ಅಕ್ಕಿ ಮುಹೂರ್ತ ಗುರುವಾರ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ನಡೆಯಿತು. ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರೂ ಸೇರಿದಂತೆ ಉಡುಪಿಯ ಅಷ್ಟಮಠಗಳ ಎಲ್ಲಾ ಎಂಟು ಮಠಗಳ ಹತ್ತು ಮಂದಿ ಯತಿಗಳು ಭಾಗವಹಿಸಿದ್ದರು. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಭೇಟಿ ನೀಡಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರೂ ಆಗಮಿಸಿದ್ದರು.
ಆಚಾರ್ಯ ಮಧ್ವ ಪ್ರತಿಪಾದಿತ ದ್ವೈತ ಮತದ ಶ್ರೀ ವಾಮನತೀರ್ಥ ಪರಂಪರೆಯ ರಥಬೀದಿಯ ಶೀರೂರು ಮಠದಲ್ಲಿ ಬೆಳಿಗ್ಗೆ 9 ಗಂಟೆಗೆ ಪ್ರಾರ್ಥನೆ ಸಲ್ಲಿಸಿ, ಅಕ್ಕಿ ಮುಡಿಗಳನ್ನು ಚಿನ್ನದ ಪಲ್ಲಕಿಯಲ್ಲಿ ಹಾಗೂ ಸಂಗ್ರಹಿತ ಮುಡಿಗಳನ್ನು ತಲೆಮೇಲೆ ಹೊತ್ತುಕೊಂಡು ಮೆರವಣಿಗೆ ಮೂಲಕ ಮೊದಲಿಗೆ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನದೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು.


ಬಳಿಕ ರಥಬೀದಿಗೆ ಪ್ರದಕ್ಷಿಣೆ ಬಂದು ಕನಕದಾಸ ಮಾರ್ಗ ಮೂಲಕ ಸಂಸ್ಕೃತ ಕಾಲೇಜು ಬಳಿ ತೆರಳಿ ಅಲ್ಲಿಂದ ಪುನಃ ಅದೇ ಮಾರ್ಗವಾಗಿ ಶೀರೂರು ಮಠಕ್ಕೆ ಆಗಮಿಸಲಾಯಿತು.


ಪೂರ್ವಾಹ್ನ 11.10ರ ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀಮಠದ ಉಪಾಸ್ಯದೇವರಾದ ಅನ್ನವಿಠಲನ ಸಮ್ಮುಖದಲ್ಲಿ ಮುಷ್ಟಿ ಅಕ್ಕಿ ಸಮರ್ಪಣೆ ಮೂಲಕ ಅಕ್ಕಿ ಮುಹೂರ್ತ ನೆರವೇರಿಸಲಾಯಿತು.


ಅದಾಗಲೇ ಸಾನ್ನಿಧ್ಯ ವಹಿಸಿದ್ದ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರು, ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು ಮತ್ತು ಶ್ರೀರಾಜರಾಜೇಶ್ವರತೀರ್ಥರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು, ಕಾಣಿಯೂರು ಶ್ರೀ ವಿದ್ವಾವಲ್ಲಭತೀರ್ಥರು, ಸೋದೆ ಶ್ರೀ ವಿಶ್ವವಲ್ಲವಲ್ಲಭತೀರ್ಥರು ಹಾಗೂ ಅದಮಾರು ಶ್ರೀ ಈಶಪ್ರಿಯತೀರ್ಥರು ಮುಷ್ಟಿ ಅಕ್ಕಿ ಸಮರ್ಪಿಸಿದರು. ಬಳಿಕ ಅಷ್ಟಮಠಗಳ ವಿದ್ವಾಂಸರು, ಗಣ್ಯರು, ಸಾರ್ವಜನಿಕ ಭಕ್ತಾದಿಗಳು ಮುಷ್ಟಿ ಅಕ್ಕಿ ಸಮರ್ಪಿಸಿದರು. ಬಳಿಕ ಸಮಸ್ತ ಯತಿಗಳಿಗೆ ಮಾಲಿಕಾ ಮಂಗಳಾರತಿ ಬೆಳಗಲಾಯಿತು.


ಬಳಿಕ ಪೂಜೆ, ದಾನದಕ್ಷಿಣೆ ಇತ್ಯಾದಿ ಪ್ರಕ್ರಿಯೆಗಳು ನಡೆದವು. ಮಠದ ಪುರೋಹಿತರಾದ ಗಿರಿರಾಜ ಉಪಾಧ್ಯ ಧಾರ್ಮಿಕ ವಿಧಿ ವಿಧಾನ ನಡೆಸಿದರು.


ಮಠದ ದಿವಾನ ಉದಯ ಸರಳತ್ತಾಯ, ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್, ಕಟೀಲು ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಮತ್ತು ಕಮಲಾದೇವಿಪ್ರಸಾದ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ ಕಿನ್ನಿಗೋಳಿ, ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಸಮಿತಿಯ ಮೋಹನ್ ಭಟ್, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮೊದಲಾದವರು ಭಾಗವಹಿಸಿದ್ದರು.


ಮುಷ್ಟಿ ಅಕ್ಕಿ ಸಮರ್ಪಿಸಿದ ಹೆಗ್ಗಡೆ
ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಮುಷ್ಟಿ ಅಕ್ಕಿ ಸಮರ್ಪಿಸಿದರು.
ಅಕ್ಕಿ ಮುಹೂರ್ತಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅಕ್ಕಿ ಮುಡಿಗಳನ್ನು ಕಳಿಸಲಾಗಿತ್ತು.

Ads on article

Advertise in articles 1

advertising articles 2

Advertise under the article