ಮಹಿಳೆ ಕುಟುಂಬದ ಶಕ್ತಿ
Sunday, March 9, 2025
ಲೋಕಬಂಧು ನ್ಯೂಸ್
ಉಡುಪಿ: ದೇಶ ಕಾಯುವ ಸೈನಿಕರು ತಮ್ಮ ಮಾತೃಭೂಮಿಯನ್ನು ರಕ್ಷಿಸಲು ಪಣ ತೊಡುವಂತೆ ಓರ್ವ ಮಹಿಳೆ ತನ್ನ ಕುಟುಂಬದಲ್ಲಿ ಎದುರಾಗುವ ಎಲ್ಲಾ ಸುಖ, ದುಃಖ, ಕಷ್ಟ ಕಾರ್ಪಣ್ಯಗಳು ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕುಟುಂಬದಲ್ಲಿ ಸೈನಿಕಳಂತೆ ತನ್ನನ್ನು ತಾನು ರೂಪಿಸಿಕೊಂಡಿದ್ದಾಳೆ. ಕುಟುಂಬಕ್ಕೆ ಶಕ್ತಿ ಎನಿಸಿಕೊಂಡಿದ್ದಾಳೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಹಿಳೆಯರು ಒಂದೇ ಕ್ಷೇತ್ರಕ್ಕೆ ಸೀಮಿತರಾಗಿರದೆ ಆರ್ಥಿಕ, ರಾಜಕೀಯ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ನಮ್ಮಿಂದ ಯಾವುದೇ ಕೆಲಸ ಮಾಡಲು ಅಸಾಧ್ಯ ಎಂದು ಭಾವಿಸಿ, ಸುಮ್ಮನೆ ಕುಳಿತರೆ ಜೀವನದಲ್ಲಿ ಮುಂದೆ ಸಾಗಲು ಆಗದು. ನಮ್ಮ ಜೀವನ ಮಟ್ಟ ಸುಧಾರಿಸುವ ಕುರಿತು ಪ್ರಗತಿಯ ಚಿಂತನೆ ಮಾಡಿದಾಗ ಯಶಸ್ಸು ನಮ್ಮದಾಗುತ್ತದೆ ಎಂದರು.
ಪುರುಷನ ಜೀವನದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಾಳೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಬಾಳಿಗೆ ಬೆಳಕಾಗುತ್ತಾಳೆ. ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಎದುರಿಸುವ ಮೂಲಕ ತಾನು ಪುರುಷರಷ್ಟೇ ಸರಿ ಸಮಾನಳು ಎಂದು ತೋರಿಸಿಕೊಟ್ಟಿದ್ದಾಳೆ. ಇಂಥ ಹೆಣ್ಣನ್ನು ಗೌರವಿಸಿ, ಪೂಜ್ಯ ಭಾವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಹಿಂದಿನ ಕಾಲದಲ್ಲಿ ಕೇವಲ ನಾಲ್ಕು ಗೋಡೆಗಳ ಒಳಗೆ ಅವಕಾಶ ವಂಚಿತರಾಗಿ ಇದ್ದ ಮಹಿಳೆಯರು, ಇಂದು ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಕೊಂಡಿದ್ದಾರೆ. ಆದರೂ ಲಿಂಗ ತಾರತಮ್ಯ ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ವೇಸಾಮಾನ್ಯವಾಗಿದೆ. ಅದನ್ನು ಹೋಗಲಾಡಿಸುವುದರೊಂದಿಗೆ ಮಹಿಳೆಯರಿಗೆ ಗೌರವಾಯುತ ಸಮಾನ ಅವಕಾಶ ದೊರಕುವಂತಾಗಬೇಕು ಎಂದು ಆಶಿಸಿದರು.
ಮಹಿಳೆಯರು ಸರಕಾರದ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಂಡು ಸಮಾಜದ ಮುನ್ನೆಲೆಗೆ ಬರಬೇಕು ಎಂದರು.
ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುವುದರೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಪೂರಕ ವಾತಾವರಣ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಪುರುಷರು ಹಾಗೂ ಮಹಿಳೆಯರು ಸಮಾಜದಲ್ಲಿ ಸಮಾನತೆಯ ನೆಲೆಯಲ್ಲಿ ಮುಂದೆ ಸಾಗಬೇಕು. ಮಹಿಳೆಯರ ಸಾಮರ್ಥ್ಯವನ್ನು ಕುಗ್ಗಿಸುವ ದಾರಿಯನ್ನು ಒಡೆದು ಮುಂದೆ ಸಾಗಬೇಕು. ಮಹಿಳೆಯರು ಯಶಸ್ಸು ಸಾಧಿಸಲು ಸಮಾಜದಲ್ಲಿ ಸುರಕ್ಷಿತ ಸ್ಥಳವನ್ನು ಸೃಷ್ಟಿಸಬೇಕು.
ಸಮಾಜ ಹಾಗೂ ಕುಟುಂಬ ಮಹಿಳೆಯರ ಸಾಧನೆಯನ್ನು ಪ್ರಶ್ನಿಸುವ ಮನೋಭಾವದಿಂದ ಹೊರಬರಬೇಕು. ಅದನ್ನು ಮನಃಪೂರ್ವಕವಾಗಿ ಒಪ್ಪುವಂಥ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ಮಹಿಳೆಯರು ಲಭ್ಯ ಅವಕಾಶಗಳನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬಾಳಬೇಕು ಎಂದರು.
ಡಾ.ಅಂಬೇಡ್ಕರ್ ಮಾತಿನಂತೆ ಮಹಿಳೆಯ ಪ್ರಗತಿ ಎಂದರೆ ಅದೇ ನಿಜವಾದ ಸಾಮಾಜಿಕ ಬದಲಾವಣೆ. ಒಂದು ರಾಷ್ಟ್ರ, ರಾಜ್ಯ ನಿರ್ಮಾಣಕ್ಕೆ ಪುರುಷರಷ್ಟೇ ಮಹಿಳೆಯರ ಕೊಡುಗೆಯೂ ಅಪಾರವಾಗಿರುತ್ತದೆ. ಮಹಿಳೆಯೂ ಸಾಮಾಜಿಕ ಬದಲಾವಣೆಯ ವಾಸ್ತುಶಿಲ್ಪಿ ಆಗಬೇಕು. ಆಕೆಯಲ್ಲಿ ಶಕ್ತಿ, ಸಾಮರ್ಥ್ಯ ಸಾಧಿಸಿ ತೋರಿಸುವ ಛಲ ಇದೆ. ಆ ನಿಟ್ಟಿನಲ್ಲಿ ಅವಕಾಶಗಳು ಅವರಿಗೆ ಸಿಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಪ್ರೊ. ನಿರ್ಮಲಾ ಕುಮಾರಿ 'ಮಹಿಳೆಯರಿಗೆ ಕಾನೂನು ಅರಿವು' ಹಾಗೂ ಉದ್ಯಮಿ ದಿವ್ಯಾರಾಣಿ 'ಆಧುನಿಕ ಮಹಿಳೆ- ಆತ್ಮವಿಶ್ವಾಸದಿಂದ ಪ್ರಗತಿಯತ್ತ' ವಿಷಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನಿ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮೊದಲಾದವರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ. ಸ್ವಾಗತಿಸಿದರು. ದೀಪ ಹಾಗೂ ಶಾರದಾ ನಿರೂಪಿಸಿ, ವಸಂತಿ ರಾವ್ ಕೊರಡ್ಕಲ್ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಉತ್ಪಾದಿಸಿದ ವಸ್ತುಗಳ ವಸ್ತುಪ್ರದರ್ಶನವನ್ನು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಮಹಿಳೆಯರಿಂದ ಮನೋರಂಜನ ಕಾರ್ಯಕ್ರಮ ನಡೆಯಿತು.