.jpg)
ಶ್ರೀಕೃಷ್ಣನಿಗೆ ಸುವರ್ಣಾಭಿಷೇಕ; ಸ್ವರ್ಣ ತುಲಾಭಾರ
Wednesday, April 30, 2025
ಲೋಕಬಂಧು ನ್ಯೂಸ್
ಉಡುಪಿ: ಅಕ್ಷಯ ತೃತೀಯ ಪರ್ವ ದಿನವಾದ ಬುಧವಾರ ಶ್ರೀಕೃಷ್ಣನಿಗೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸುವರ್ಣ ತುಲಾಭಾರ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀಕೃಷ್ಣನ ಮೂಲ ವಿಗ್ರಹಕ್ಕೆ ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಕಿರಿಯ ಶ್ರೀಪಾದರು ಸುವರ್ಣ ಕನಕಾಭಿಷೇಕ ನೆರವೇರಿಸಿದರು.
ಸಂಜೆ ಚಂದ್ರಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅಕ್ಷಯ ತೃತೀಯಾ ದಿನದಂದು ಅಗ್ನಿಪರೀಕ್ಷೆ ಮೂಲಕ ಸೀತಾಮಾತೆ ಶ್ರೀರಾಮನನ್ನು ಸೇರಿದ ದಿನ. ಸೀತೆ ಭೂಜಾತೆ, ಸಾಕ್ಷಾತ್ ಲಕ್ಷ್ಮಿ. ಚಿನ್ನ, ಭೂಮಿಯಲ್ಲಿ ಲಭಿಸುವ ಅಮೂಲ್ಯ ಲೋಹ. ಅದೂ ಕೂಡಾ ಲಕ್ಷ್ಮೀಸ್ವರೂಪ. ಚಿನ್ನವನ್ನು ದೇವರಿಗೆ ಸಮರ್ಪಿಸಿ ಧರಿಸುವುದರಿಂದ ಶ್ರೇಯಸ್ಸು ಎಂದರು.
ಸೀತೆಯನ್ನು ರಾಮನಿಗೆ ಒಪ್ಪಿಸಿದಾತ ಹನುಮ. ಹಾಗಾಗಿ ಹನುಮನ ಮೂಲಕ ಚಿನ್ನ ಸಮರ್ಪಿಸಿದರೆ ರಾಮಾನುಗ್ರಹ ಸಾಧ್ಯ.
ಪರಶುರಾಮ ಜಯಂತಿಯ ಈ ದಿನ ಸುವರ್ಣ ಸಮರ್ಪಣೆಗೆ ವಿಶೇಷತೆ ಇದೆ ಎಂದರು.
ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀ ವಿದ್ಯೇಂದ್ರತೀರ್ಥರು ಸಾನ್ನಿಧ್ಯ ವಹಿಸಿದ್ದರು.
ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.