
ಮೇ 17: ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Tuesday, May 13, 2025
ಲೋಕಬಂಧು ನ್ಯೂಸ್
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ 15ನೇ ಕನ್ನಡ ಸಾಹಿತ್ಯ ಸಮ್ಮೇಳನ 'ಕಲಾಯತನ' ಈ ತಿಂಗಳ 17ರಂದು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಹಿರಿಯ ಯಕ್ಷಗಾನ ವಿದ್ವಾಂಸ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಅಧ್ಯಕ್ಷತೆ ವಹಿಸುವರು ಎಂದು ಕಸಾಪ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ ಎಚ್.ಪಿ. ತಿಳಿಸಿದರು.
ನಿರಂತರ 12 ಗಂಟೆ ಕಾರ್ಯಕ್ರಮ
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಬೆಳಗ್ಗೆ 8:15ರಿಂದ ರಾತ್ರಿ 8:15ರ ವರೆಗೆ ನಿರಂತರ 12 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ.
ಮಲ್ಪೆಯ ಸಿಟಿಜನ್ ಸರ್ಕಲ್ ನಿಂದ ಮೆರವಣಿಗೆ ಮೂಲಕ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಲಾಗುವುದು. 9:25ಕ್ಕೆ ಕನ್ನಡ ಧ್ವಜಾರೋಹಣ ಹಾಗೂ ಪರಿಷತ್ ಧ್ವಜಾರೋಹಣ ನಡೆಯಲಿದೆ.
9:30ಕ್ಕೆ ನೃತ್ಯನಿಕೇತನ ಕೊಡವೂರು ಅವರಿಂದ ನೃತ್ಯ ಸಿಂಚನ, 9.50ಕ್ಕೆ ಸರಿಯಾಗಿ ದಿ| ಕೂರಾಡಿ ಸೀತಾರಾಮ ಅಡಿಗ ನೆನಪಿನ ಪುಸ್ತಕ ಮಳಿಗೆಯನ್ನು ಸಾಹಿತಿ ಡಾ. ಗಣನಾಥ ಎಕ್ಕಾರು ಉದ್ಘಾಟಿಸುವರು. ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ್ ಸಮ್ಮೇಳನ ಉದ್ಘಾಟಿಸುವರು ಎಂದರು.
ಸಾಧಕರಿಗೆ ಅಭಿನಂದನೆ
ಹಿರಿಯ ಸಾಹಿತಿ ಎಚ್. ಡುಂಡಿರಾಜ್ ಉಪಸ್ಥಿತಿಯಲ್ಲಿ ಸಾಧಕರಾದ ಜಯನ್ ಮಲ್ಪೆ, ಸಿ.ಎಸ್.ರಾವ್, ವಿ.ಜಿ. ಶೆಟ್ಟಿ, ಭುವನಪ್ರಸಾದ್ ಹೆಗ್ಡೆ, ಹರಿಪ್ರಸಾದ್ ರೈ, ವಾದಿರಾಜ್ ಭಟ್, ವೆಂಕಟೇಶ್ ಪೈ, ವಿನಯ್ ಆಚಾರ್ಯ ಮುಂಡ್ಕೂರ್ ಅವರನ್ನು ಅಭಿನಂದಿಸಲಾಗುವುದು.
ಇದೇ ಸಂದರ್ಭದಲ್ಲಿ ನಾಲ್ಕು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಶಿಷ್ಟ ರೀತಿಯ ಯಕ್ಷ ಕವಿಗೋಷ್ಠಿ, ಯಕ್ಷಗಾನ, ದೃಶ್ಯ ಭಾಷೆ ಸಂಸ್ಕೃತಿ ಕುರಿತಾದ ವಿಚಾರಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ ನಡೆಯಲಿದೆ.
ಸನ್ಮಾನ
ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸುಬ್ರಮಣ್ಯ ಜಿ. ಕುರ್ಯ (ಪತ್ರಿಕಾ ರಂಗ), ಡೊನಾತ್ ಡಿ. ಅಲ್ಮೆಡಾ (ಸಾಹಿತ್ಯ), ಮಂಜುನಾಥ್ ಭಟ್ ಮೂಡುಬೆಟ್ಟು (ಯೋಗ), ನಾರಾಯಣ ಸರಳಾಯ (ಸಂಗೀತ), ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ (ಸಮಷ್ಟಿ), ಚಂದ್ರ ಚಿತ್ತ (ಚಿತ್ರಕಲೆ), ಅನಿಲ್ ಶಂಕರ್ (ದೃಶ್ಯ ಮಾಧ್ಯಮ), ಪ್ರಕಾಶ್ ಕೊಡಂಕೂರು (ಛಾಯಾಗ್ರಹಣ), ಡಾ. ಸುರೇಶ್ ಶೆಣೈ (ವೈದ್ಯಕೀಯ), ಮಂಜುನಾಥ್ ಕಾಮತ್ (ಸಾಮಾಜಿಕ ಜಾಲತಾಣ), ಬಾಲಕೃಷ್ಣ ಕೊಡವೂರು (ರಂಗ ನಟ), ಬಾಲಕೃಷ್ಣ ಮೆಂಡನ್ (ಆಹಾರೋದ್ಯಮ), ರಮೇಶ್ ಮಂಚಿ ( ರಂಗಭೂಮಿ), ಪ್ರಶಾಂತ್ ಕಡಿಯಾಳಿ (ನೃತ್ಯ ), ವಿದುಷಿ ಶಾಂಭವಿ ಆಚಾರ್ಯ (ಭರತನಾಟ್ಯ ), ಕುಸುಮ ಕಾಮತ್ (ಸಾಂಸ್ಕೃತಿಕ ), ವಾಣಿ ಬಾಲಚಂದ್ರ (ಕ್ರೀಡೆ), ಸ್ವರಾಜ್ಯ ಲಕ್ಷ್ಮೀ ಅಲೆವೂರು (ಕಿರುತೆರೆ), ಅವನಿ ಗಣೇಶ್ ಕಲ್ಮಾಡಿ (ಕ್ರೀಡೆ ), ಮುಕ್ತಾ ಶ್ರೀನಿವಾಸ್ ಮೂಡುಬೆಟ್ಟು (ವಸ್ತ್ರ ವಿನ್ಯಾಸ ), ಅಶ್ವಿನಿ ಶ್ರೀನಿವಾಸ್ (ಲಲಿತಕಲೆ), ಸುರೇಖಾ ಭಟ್ (ರಂಗೋಲಿ), ಮಾಸ್ಟರ್ ಆಶ್ಲೇಷ್ ಆರ್. ಭಟ್ (ಚಲನಚಿತ್ರ ), ಮಾನ್ಸಿ ಕೆ. ಕೋಟ್ಯಾನ್ ಕೊಳ (ನೃತ್ಯ ), ಮಾನ್ವಿ ಎಸ್.ಎ. ಪುತ್ತೂರು. ಶಿಕ್ಷಣ ಹಾಗೂ ಸಂಘಸಂಸ್ಥೆಗಳಾದ ಹಳೆ ವಿದ್ಯಾರ್ಥಿ ಸಂಘ ಮತ್ತು ಯುವಕ ಮಂಡಲ ಕೊಡ ವೂರು, ಸರಸ್ವತಿ ಜಾನಪದ ಕಲಾತಂಡ ವಡಭಾಂಡೇಶ್ವರ ಮಲ್ಪೆ, ಸ್ಕಂದ ಚಂಡೆ ಬಳಗ ವಡಭಾಂಡೇಶ್ವರ, ಯುವಕ ಮಂಡಲ ಮೂಡುಬೆಟ್ಟು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಡವೂರು, ಮೂಕಾಂಬಿಕಾ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಪಾಳೆಕಟ್ಟೆ ಅವರನ್ನು ಸನ್ಮಾನಿಸಲಾಗುವುದು.
ಸಮಾರೋಪ ಭಾಷಣವನ್ನು ಸಾಹಿತಿ ಡಾ. ನಿಕೇತನ ಮಾಡಲಿದ್ದಾರೆ.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಯಕ್ಷ ರಂಗಾಯಣ ಕಾರ್ಕಳ ಅವರಿಂದ ಕುಮಾರವ್ಯಾಸ ಭಾರತದ ವಿರಾಟ ಪರ್ವದಿಂದ ಆಯ್ದ ಭಾಗ 'ಆರೊಡನೆ ಕಾದು ವೇನು' ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರವಿರಾಜ್ ವಿವರಿಸಿದರು.
ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಹಾಗೂ ರಂಜಿನಿ ವಸಂತ್, ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಕೊಡವೂರು ಇದ್ದರು.