ನನಸಾಗದ ರಾಮರಾಜ್ಯ
Sunday, April 13, 2025
ಲೋಕಬಂಧು ನ್ಯೂಸ್
ಉಡುಪಿ: ಸಮಸ್ತ ಭಾರತೀಯರ ಕನಸಾಗಿದ್ದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಾಕಾರವಾಗಿದೆ. ಆದರೆ, ರಾಮರಾಜ್ಯ ನಿರ್ಮಾಣ ಕನಸಾಗಿಯೇ ಉಳಿದಿದೆ. ಎಲ್ಲಿ ನೋಡಿದರಲ್ಲಿ ಕೊಲೆ, ಅತ್ಯಾಚಾರ, ಅನಾಚಾರಗಳು ನಡೆಯುತ್ತಿವೆ. ಅದು ಕಳೆದಾಗ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಪೇಜಾವರ ಮಠ ಆಶ್ರಯದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪೆರ್ಣಂಕಿಲ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಭಕ್ತಿ ಸಿದ್ಧಾಂತೋತ್ಸವ, ಶ್ರೀಮದ್ ಬ್ರಹ್ಮಸೂತ್ರ ಅನುವ್ಯಾಖ್ಯಾನ ಸುಧಾಮಂಗಳೋತ್ಸವ, ಶತಕೋಟಿ ರಾಮತಾರಕ ಮಂತ್ರ ಜಪ ಅಭಿಯಾನ ಅಂಗವಾಗಿ ಭಾನುವಾರ ನಡೆದ ಸಂತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ನಾವು ಹೇಗಿರಬೇಕು ಎಂಬುದಕ್ಕೆ ಶ್ರೀರಾಮ ಆದರ್ಶನಾದರೆ, ಹೇಗಿರಬಾರದು ಎನ್ನುವುದಕ್ಕೆ ರಾವಣ ಉದಾಹರಣೆ.
ಪ್ರತಿಯೊಬ್ಬರಿಗೂ ಶ್ರೀರಾಮ ಆದರ್ಶ ಆಗಬೇಕು. ಆತನ ನಡೆ ನುಡಿಯ ಪಾಲನೆಯಾಗಬೇಕು. ನಮ್ಮ ಮನೆಯ ಮಕ್ಕಳಲ್ಲಿ ರಾಮನ ಆದರ್ಶ ಮೈಗೂಡಿಸಬೇಕು. ರಾಮನ ಆದರ್ಶಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಶ್ರೀಗಳು ಆಶಿಸಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಹರಿಹರಪುರ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀಮೋಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿ, ಆನೆಗೊಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಬೆಂಗಳೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬಾಳೆಕುದ್ರು ಮಠದ ಶ್ರೀ ಸದಾಶಿವ ವಾಸುದೇವಾಶ್ರಮ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಬೈಲೂರು ಶ್ರೀರಾಮಕೃಷ್ಣಾಶ್ರಮದ ಶ್ರೀ ವಿನಾಯಕಾನಂದ ಸ್ವಾಮೀಜಿ, ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ, ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ, ಕೂಡಲಿ ಶೃಂಗೇರಿ ಮಠದ ಶ್ರೀ ಅಭಿನವ ಭಾರತೀ ಸ್ವಾಮೀಜಿ, ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ಭೀಮನಕಟ್ಟೆ, ಸಾನ್ನಿಧ್ಯ ವಹಿಸಿದ್ದರು.
ಪೆರ್ಣಂಕಿಲ ಹರಿದಾಸ ಭಟ್, ರಾಮಚಂದ್ರ ಉಪಾಧ್ಯಾಯ, ಪೇಜಾವರ ಮಠದ ಸಿಸಿಓ ಸುಬ್ರಹ್ಮಣ್ಯ ಭಟ್ ಮೊದಲಾದವರಿದ್ದರು.
ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ, ನಿರೂಪಿಸಿದರು.