
ಗೃಹಸಚಿವರಿಗೆ ಆಕ್ರಮಣ ಮಾಡಿದವರ ಬಂಧಿಸುವ ತಾಕತ್ತು ಇದೆಯೇ?
Monday, May 5, 2025
ಲೋಕಬಂಧು ನ್ಯೂಸ್
ಉಡುಪಿ: ಹಿಂದೂಗಳ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದವರನ್ನು ಬಂಧಿಸುವ ಸರಕಾರ, ತಮ್ಮದೇ ಗೃಹಸಚಿವರಿಗೆ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆಕ್ರಮಣ ಮಾಡಿದ ಮುಸ್ಲಿಂ ಮುಖಂಡರನ್ನು ಬಂಧಿಸುವ ತಾಕತ್ತು ಇದೆಯೇ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದ.ಕ ಜಿಲ್ಲೆಯ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೊಲೆ ನಂತರ ಜಿಲ್ಲೆಗೆ ಆಗಮಿಸಿದ ಗೃಹಸಚಿವ ಪರಮೇಶ್ವರ, ಶಾಸಕರನ್ನು ಆಹ್ವಾನಿಸದೇ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.
ಹಿಂದೂ ಸಮಾಜದ ಪರ ಇರುವ ಎಲ್ಲರ ಮೇಲೆ ದಾಳಿ ನಡೆಯುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬರೆದರೆ ಬಂಧಿಸುತ್ತಾರೆ. ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗುತ್ತದೆ. ಆದರೆ, ಸಭೆಯಲ್ಲಿ ರಾಜ್ಯದ ಗೃಹಸಚಿವ ಪರಮೇಶ್ವರ್ ಅವರಿಗೆ ಮುಸ್ಲಿಂ ಮುಖಂಡರು ಮೇಜು ಕುಟ್ಟಿ ಭಯ ಹುಟ್ಟಿಸುವ ರೀತಿಯಲ್ಲಿ ಆಕ್ರಮಣ ನಡೆದಿದೆ. ಧಮ್ಕಿ ಹಾಕಿದವರನ್ನು ಬಂಧಿಸಲು ತಾಕತ್ತಿಲ್ಲ. ಗುಂಡು ಹೊಡೆಯಿರಿ ಎಂದು ಹೇಳಿಲ್ಲ ಬಂಧನ ಮಾಡಿ, ರಾಜ್ಯದಲ್ಲಿ ಸರಕಾರ ಇದೇಯೇ ಸತ್ತು ಹೋಗಿದೆಯೇ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಆಡಳಿತದಲ್ಲಿ ರಕ್ಷಣೆ ಇಲ್ಲ
ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಎಲ್ಲಾ ಕಾಲದಲ್ಲೂ ಹಿಂದೂಗಳ ಕಗ್ಗೊಲೆ ರಾಜಕಾರಣ ನಡೆಸಿದ್ದಾರೆ. ಭಯೋತ್ಪಾದನಾ ಶಕ್ತಿಗಳಿಗೆ ಜೀವ ತುಂಬುವ ಕೆಲಸವನ್ನು ಈ ಸರಕಾರ ಮಾಡುತ್ತಿದೆ. ಹಿಂದೆ ಇದೇ ಸರಕಾರ ಇದ್ದಾಗ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್ ಹತ್ಯೆಯಾಗಿತ್ತು. ಈ ಬಾರಿ ಬೆಳಗಾವಿಯ ಜೈನ ಮುನಿ ಹತ್ಯೆಯಿಂದ ಸುಹಾಸ್ ಶೆಟ್ಟಿ ಕಗ್ಗೊಲೆಯ ವರೆಗೆ ಹಿಂದೂಗಳ ಮೇಲೆ ಆಕ್ರಮಣ ನಡೆದಿದೆ ಎಂದರು.
ಪಾಕಿಸ್ತಾನ ಧ್ವಜ ಹಿಡಿದರೆ, ವಿಧಾನಸೌಧದಲ್ಲಿ ಜಿಂದಾಬಾದ್ ಹೇಳಿದ್ದಕ್ಕೆ ಕೇಸ್ ಆಗುವುದಿಲ್ಲ. ಟ್ವೀಟ್ ಮೂಲಕ ಹಿಂದೂಗಳ ಹತ್ಯೆ ಮಾಡುವ ಎಚ್ಚರಿಕೆ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ, ಆರೋಪಿಯ ಬಂಧನವಾಗಿಲ್ಲ. ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗೂ, ಮಂಗಳೂರಿನ ಚಟುವಟಿಕೆಗೂ ಯಾವ ವ್ಯತ್ಯಾಸವೂ ಇಲ್ಲ. ಕಾನೂನು, ಜನರ ರಕ್ಷಣೆ ಎರಡರಲ್ಲೂ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಸುಹಾಸ್ ಮನೆಗೆ ಭೇಟಿ ನೀಡದಂತೆ ಒತ್ತಡ
ಕಾಂಗ್ರೆಸ್ ನಾಯಕರು ಸುಹಾಸ್ ಮನೆಗೆ ಭೇಟಿ ನೀಡಿದರೆ ಕಾಂಗ್ರೆಸಿನ ಮುಸ್ಲಿಂ ಮುಖಂಡ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಇಂಥ ರಾಜಕೀಯಕ್ಕೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದ್ದು, ಸರ್ಕಾರ ಇರುವುದೇ ಹಿಂದೂ ಸಮಾಜದ ಧಮನಕ್ಕಾಗಿ ಎಂಬುದು ಸ್ಪಷ್ಟವಾಗಿದೆ.
ಈ ಸರ್ಕಾರದ ಯೋಚನೆಯೇ ತಪ್ಪಾಗಿದೆ. ಇದು ಹಿಂದೂಗಳ ವಿರುದ್ದ, ಹಿಂದೂಗಳ ಪರವಾಗಿ ಇರುವವರನ್ನು ಬಂಧಿಸಲು ಈ ಆ್ಯಂಟಿ ಕಮ್ಯುನಲ್ ಕಾರ್ಯಪಡೆ ರಚಿಸುತ್ತಿದ್ದಾರೆ. ಎಲ್ಲಾ ಸಮುದಾಯಗಳಿಗೆ ಸರಿಯಾದ ನ್ಯಾಯ ಕೊಟ್ಟು ಕಾರ್ಯಪಡೆ ಜಾರಿಗೆ ತರಲಿ. ಕಾಂಗ್ರೆಸ್ ಸರ್ಕಾರದ ಈ ಕಾರ್ಯಪಡೆಗಳು ಒಂದೇ ಸಮುದಾಯಕ್ಕೆ ಸೀಮಿತವಾಗಿದೆ ಎಂದರು.
ಈ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದೆಯಾ? ಹಿಂದೂಗಳಿಗೆ ಬೆದರಿಕೆ ಹಾಕಿದವರ ಬಗ್ಗೆ ತನಿಖೆ, ಬಂಧನ ಮಾಡುವ ಯಾವುದೇ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಇಬ್ಬರೂ ಕಾರ್ಯಕರ್ತರಿಗೆ ಪೊಲೀಸ್ ನೀಡಿ, ರಕ್ಷಣೆ ಮಾಡಬೇಕು. ಧಮ್ಕಿ ಹಾಕಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸರಕಾರ ಪರಿಹಾರವಾಗಿ ಕೊಟ್ಟ ಹಣವನ್ನು ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆಗೆ ಬಳಸಿದ್ದಾನೆ ಎಂಬ ಆರೋಪವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕು ಎಂದರು.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎಂದು ಸಂಬೋಧಿಸಿದ ಗೃಹಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್, ಸುಹಾಸ್ ಶೆಟ್ಟಿ ಮೇಲೆ ಎರಡು ವರ್ಷದಿಂದ ಯಾವುದೇ ಕೇಸ್ ಇಲ್ಲ. ಯಾವುದೇ ಘಟನೆಗಳಲ್ಲಿ ಸುಹಾಸ್ ಇಲ್ಲ, ರೌಡಿಶೀಟರ್ ಎಂದು ತೀರ್ಮಾನ ಮಾಡಬೇಕಾಗಿರುವುದು ನ್ಯಾಯಾಲಯ, ಗೃಹ ಸಚಿವರಲ್ಲ.
ಕಾಂಗ್ರೆಸ್ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳು ರೌಡಿಗಳೇ. ಜೈಲಿಗೆ ಹೋಗಿ ಬಂದವರೇ ಜಾಸ್ತಿ ಇದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆಶಿಯಿಂದ ಆರಂಭಿಸಿ ಎಲ್ಲರ ಮೇಲೆ ಕೇಸ್ ಇದೆ. ಸರ್ಕಾರದಲ್ಲಿ ಇರುವವರೆಲ್ಲರೂ ರೌಡಿಗಳೇ? ಉತ್ತರ ಕೊಡಿ ಎಂದರು.
ಹಿಂದೂ ಸಂಘಟನೆ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಕೊಲೆಯಾಗಿದೆ. ಹಿಂದೂಗಳ ರಕ್ಷಣೆ ಮಾಡಲು ಹೊರಟವರನ್ನು ಹತ್ಯೆ ಮಾಡುತ್ತಿದ್ದು, ಈಗಾಗಲೇ ಟಾರ್ಗೆಟ್ ಗ್ರೂಪ್ ರಚನೆಯಾಗಿದೆ. ಟಾರ್ಗೆಟ್ ಗ್ರೂಪಿನ ಒಂದು ಅಂಶದ ಕೆಲಸ ಆರಂಭವಾಗಿದೆ. ಸುಹಾಸ್ ಮೇಲೆ ಗೂಬೆಕೂರಿಸುವ ಕೆಲಸವನ್ನು ಬಿಟ್ಟು, ಸರ್ಕಾರ ಕೆಲಸ ಮಾಡಬೇಕು ಎಂದರು.
ಕಾಶ್ಮೀರದ ಪೆಹಲ್ಗಾಮ್ ಘಟನೆಗೆ ಕೇಂದ್ರ ಗುಪ್ತಚರ ವೈಫಲ್ಯ ಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಶ್ಮೀರದ ಘಟನೆಯನ್ನು ಕೇಂದ್ರ ಸರ್ಕಾರ ನಿಯಂತ್ರಣ ಮಾಡಿದೆ. ಪಾಕಿಸ್ತಾನ ಭಯಭೀತ ಆಗಿದ್ದು, ಉಗ್ರರನ್ನು ಹುಡುಕಿ ಹೊಡೆಯುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬಾಂಬೆ, ಬೆಂಗಳೂರು, ಕೊಯಮತ್ತೂರುನಲ್ಲಿ ಬಾಂಬ್ ಸ್ಪೋಟವಾಗಿತ್ತು.
ಆದರೆ, 2014ರ ನಂತರ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ಬಿಜೆಪಿ ಸರಕಾರ ಯಶಸ್ವಿಯಾಗಿದೆ. ಆರ್ಟಿಕಲ್ 370 ರದ್ದುಗೊಳಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿದೆ. ಈಗಲೂ ಉಗ್ರರನ್ನು ಹತೋಟಿಯಲ್ಲಿಡುವ ಕೆಲಸ ನಡೆಯುತ್ತಿದೆ ಎಂದು ನಳಿನ್ ಕುಮಾರ್ ನುಡಿದರು.