-->
ದ್ವೇಷ ಭಾಷಣ: ಸದನದಲ್ಲಿ ಚರ್ಚಿಸಿ ಕಾನೂನು

ದ್ವೇಷ ಭಾಷಣ: ಸದನದಲ್ಲಿ ಚರ್ಚಿಸಿ ಕಾನೂನು

ಲೋಕಬಂಧು ನ್ಯೂಸ್, ಮಂಗಳೂರು
ದ್ವೇಷ ಭಾಷಣ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಾನೂನು ಬಲಪಡಿಸುವ ಅಗತ್ಯವಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಕಠಿಣ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡೂ ರಾವ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸಾರ್ವಜನಿಕ ಅಹವಾಲು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.


ಜಿಲ್ಲೆಯಲ್ಲಿ ಕೋಮು ಪ್ರಚೋದನೆಗಳು ಅಮಾಯಕರ ಹತ್ಯೆಗೆ ಕಾರಣವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹಲ್ಲೆ, ಹತ್ಯೆ ಸೇರಿದಂತೆ ಕೋಮು ಗಲಭೆ ಹಾಗೂ ಪ್ರಚೋದನೆ ಕೃತ್ಯಗಳಲ್ಲಿ ತೊಡಗಿರುವವರು ಅಕ್ರಮ ಚಟುವಟಿಕೆಗಳಲ್ಲೂ ಭಾಗಿಯಾಗಿರುತ್ತಾರೆ. ಆದರೆ, ಇಂಥ ಪ್ರಕರಣಗಳಲ್ಲಿ ಸುಲಭವಾಗಿ ಜಾಮೀನು ದೊರೆಯುತ್ತದೆ. ಹಾಗಾಗಿ ಕಾನೂನಿನ ಭಯ ಇಲ್ಲವಾಗಿದೆ. ಅದಕ್ಕಾಗಿ ಕಠಿಣ ಕಾನೂನಿನ ಅಗತ್ಯವಿದೆ ಎಂದರು.


ಈ ರೀತಿಯ ಕೋಮು ಭಾಷಣಗಳನ್ನು ಮಾಡುವರು ಹಿರಿಯ ನಾಯಕರೇ ಆಗಿರುತ್ತಾರೆ. ಯತ್ನಾಳ್ ಆದಿಯಾಗಿ ಜಿಲ್ಲೆಯ ಶಾಸಕರೂ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಆದರೂ ಸುಲಭವಾಗಿ ಜಾಮೀನು ದೊರೆಯುತ್ತದೆ.


ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವವರಿಗೂ ಸಂಘಟನೆಯ ಬೆಂಬಲ, ರಾಜಕೀಯ ರಕ್ಷಣೆ ಇದೆ. ಈಗಾಗಲೇ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಕೋಮು ಸಂಘರ್ಷ, ಗಲಭೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಆ ಮೂಲಕ ಎಲ್ಲಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಇತಿಶ್ರೀ ಹಾಡುತ್ತೇವೆ.


ಯಾವುದೇ ಸಂಘಟನೆಯನ್ನು ಬ್ಯಾನ್ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ. ಆ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬಹುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜ ಮತ್ತು ಮಂಜುನಾಥ ಭಂಡಾರಿ, ಮುಖಂಡರಾದ ಕಣಚೂರು ಮೋನು, ಪದ್ಮರಾಜ್, ಮುಹಮ್ಮದ್ ಮೋನು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article