.jpg)
ಕರಾವಳಿಯ ಜಾನಪದ ಅಧ್ಯಯನಕ್ಕೆ ಕಾರಂತರ ಕೊಡುಗೆ ಅಪಾರ
Friday, May 16, 2025
ಲೋಕಬಂಧು ನ್ಯೂಸ್, ಉಡುಪಿ
ಕರಾವಳಿಯ ಜಾನಪದವನ್ನು ಕೇಂದ್ರವಾಗಿಟ್ಟುಕೊಂಡು ಡಾ. ಶಿವರಾಮ ಕಾರಂತರು ಸಾಹಿತ್ಯ ರಚನೆ ಮಾಡಿದ್ದಾರೆ. ಆ ದೃಷ್ಟಿಯಿಂದ ಕಾರಂತರ ಸಾಹಿತ್ಯದ ಅಧ್ಯಯನವೆಂದರೆ ಕರಾವಳಿಯ ಜಾನಪದ ಅಧ್ಯಯನವೂ ಆಗುತ್ತಿದೆ ಎಂದು ಜಾನಪದ ಸಂಶೋಧಕ ಪ್ರೊ.ಎಸ್.ಎ.ಕೃಷ್ಣಯ್ಯ ಹೇಳಿದರು.
ಶುಕ್ರವಾರ ಬ್ರಹ್ಮಗಿರಿ ರೆಡ್ ಕ್ರಾಸ್ ಭವನದಲ್ಲಿ ಕೋಟ ಶಿವರಾಮ ಕಾರಂತ ಟ್ರಸ್ಟ್ ಹಾಗೂ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಶಿವರಾಮ ಕಾರಂತರ ಬರಹ ಮತ್ತು ಜಾನಪದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಡಾ. ಕಾರಂತರು ಸಾಹಿತ್ಯ ಮಾತ್ರವಲ್ಲದೆ ಪರಿಸರದ ಬಗೆಗೆ ಅವರ ಹೋರಾಟ ಮಹತ್ತರವಾಗಿದೆ. ದಿಟ್ಟತನ, ಸ್ಪಷ್ಟ ನೇರ ಮಾತು ಅವರಲ್ಲಿ ಕಾಣುತ್ತಿದ್ದು, ವಿಶ್ವದಲ್ಲೇ ಕರಾವಳಿಯ ಹೆಸರನ್ನು ಸಾಹಿತ್ಯದಲ್ಲಿ ಮುಂಚೂಣಿಯಲ್ಲಿ ಇರಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ಕರ್ನಾಟಕ ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ಪ್ರಕೃತಿಯ ಸೂಕ್ಷ್ಮತೆಗಳನ್ನು ಗಮನಿಸಿ ಅದನ್ನು ತಮ್ಮ ಸಾಹಿತ್ಯದ ಮೂಲಕ ಜನರಿಗೆ ತಲುಪಿಸಿದ ಕೆಲವೇ ಕೆಲವು ಸಾಹಿತಿಗಳಲ್ಲಿ ಕಾರಂತರು ಒಬ್ಬರು. ವಿವಿಧ ಕ್ಷೇತ್ರಗಳಲ್ಲಿ ಅವರು ಹೊಂದಿದ್ದ ಜ್ಞಾನ ಅಗಾಧ ಎಂದರು.
ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಶ್ರೀಧರ ಪ್ರಸಾದ್ ಕೆ. ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಇತ್ತೀಚೆಗೆ ನಿಧನರಾದ ಪ್ರೊ. ಹೇರಂಜೆ ಕೃಷ್ಣ ಭಟ್ ಹಾಗೂ ನಂದಳಿಕೆ ಬಾಲಚಂದ್ರ ರಾವ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ನಿಕೇತನಾ, ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಪಿ.ಬಿ., ಪ್ರಾಧ್ಯಾಪಕಿ ಹೇಮಾವತಿ ಮೊದಲಾದವರಿದ್ದರು.
ಡಾ. ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿ, ತ್ರಿವೇಣಿ ನಿರೂಪಿಸಿದರು. ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಜಿ. ಎಮ್. ಶರೀಫ್ ವಂದಿಸಿದರು.