
ರೈಲ್ವೆ ಮೇಲ್ಸೇತುವೆ ಗರ್ಡರ್ ಅಳವಡಿಕೆ
Monday, May 12, 2025
ಲೋಕಬಂಧು ನ್ಯೂಸ್
ಉಡುಪಿ: ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಗರ್ಡರ್ ಜೋಡಣೆ ಪ್ರಕ್ರಿಯೆಯನ್ನು ಸೋಮವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ವೀಕ್ಷಿಸಿ, ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಕಾಮಗಾರಿಗೆ ಬೇಕಿರುವ ಎಲ್ಲ ಅನುಮತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಆದಿವುಡುಪಿ ಭಾಗದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಒಂದು ಹಾಗೂ ಎರಡನೇ ಹಂತದಲ್ಲಿ ಪರಿಹಾರ ನೀಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ 24 ಮಂದಿಗೆ ಪರಿಹಾರ ಸಿಕ್ಕಿರಲಿಲ್ಲ. ಅದನ್ನು ಒಂದೆರಡು ದಿನದೊಳಗೆ ಪಾವತಿಸಲಾಗುವುದು. ಪರಿಹಾರ ನೀಡುವ ಬಗ್ಗೆ ಅವರಿಗೆ ಲಿಖಿತವಾಗಿ ತಿಳಿಸಲಾಗಿದೆ.
ಸಂತೆಕಟ್ಟೆ ಸುರಂಗದಲ್ಲಿ ಒಂದು ಪಥಕ್ಕೆ ಕಾಂಕ್ರೀಟ್ ಮಾಡಲಾಗಿದೆ. ಈ ಕಾಮಗಾರಿಯೂ ವೇಗವಾಗಿ ನಡೆಯುತ್ತಿದ್ದು, ದಿನನಿತ್ಯ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಅಂಬಲಪಾಡಿಯದ್ದೂ ನಿಗದಿತ ಪ್ರಮಾಣಕ್ಕಿಂತ ವೇಗವಾಗಿ ಕಾಮಗಾರಿ ನಡೆಯುತ್ತಿದ್ದು, ಹಂತ-ಹಂತವಾಗಿ ಎಲ್ಲ ಕಾಮಗಾರಿಗಳನ್ನೂ ಪೂರ್ಣಗೊಳಿಸಲಾಗುವುದು ಎಂದರು.
ವೇಗ ಪಡೆದ ಕಾಮಗಾರಿ
ಇತ್ತೀಚೆಗಷ್ಟೇ ಲಕ್ನೋದಿಂದ ಆಗಮಿಸಿದ್ದ ಆರ್‌ಡಿಎಸ್‌ಓ ಅವರು ಸ್ಥಳವನ್ನು ವೀಕ್ಷಿಸಿ ಹೆಚ್ಚುವರಿ ವೆಲ್ಡಿಂಗ್ ಮಾಡುವ ಪ್ರಕ್ರಿಯೆಗೆ ಅನುಮತಿ ನೀಡಿದ್ದರು. ಈ ನಡುವೆ ಕೇಂದ್ರ ರೈಲ್ವೇ ಸಚಿವರು ರೈಲು ಸಂಚಾರದಲ್ಲಿ ಮಾರ್ಪಾಡು ಮಾಡುವ ಪ್ರಕ್ರಿಯೆಗೆ ಅನುಮತಿ ನೀಡಿದ ಕಾರಣ ಕಾಮಗಾರಿ ಮತ್ತಷ್ಟು ವೇಗ ಪಡೆದುಕೊಂಡಿದೆ.
60 ಮೀಟರ್‌ನ ಗರ್ಡರ್ ಇದಾಗಿದ್ದು, 1.5 ಮೀ.ಮುಂದೆ ಹೋಗಲು 20 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈ ಕಾರಣಕ್ಕೆ ಸೋಮವಾರ ಬೆಳಗ್ಗೆ 11.30ರಿಂದ ಹೊರಡುವ ರೈಲಿನ ಸಮಯದಲ್ಲಿ ಸುಮಾರು ಅರ್ಧ ಗಂಟೆಗಳಷ್ಟು ಕಾಲ ವ್ಯತ್ಯಯ ಕಂಡುಬಂತು. ರೈಲು ಹಾದುಹೋಗುವ ವೇಳೆ ಕಾಮಗಾರಿ ಸ್ಥಗಿತಗೊಳಿಸಲಾಯಿತು. ಮಂಗಳವಾರ ಗರ್ಡರ್ ನ್ನು ಮತ್ತೊಂದು ತುದಿಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಗರ್ಡರ್ ಮತ್ತೊಂದು ತುದಿಗೆ ತಲುಪಿದ ಅನಂತರ ಅಡಿಭಾಗದಲ್ಲಿ ಅಳವಡಿಸಲಾಗಿರುವ ಮರದ ತುಂಡುಗಳು ಹಾಗೂ ಕ್ರಿಬ್‌ಸ್‌ಗಳನ್ನು ತೆಗೆಯಲಾಗುತ್ತದೆ. ಬಳಿಕ ಕಾಂಕ್ರೀಟ್ ಹಾಕುವ ಪ್ರಕ್ರಿಯೆ ನಡೆಯಲಿದ್ದು, ಕ್ಯೂರಿಂಗ್ ಮಾಡಲು ಕನಿಷ್ಟ 10 ದಿನಗಳಾದರೂ ಬೇಕು. ಈ ಎಲ್ಲ ಪ್ರಕ್ರಿಯೆಗಳು ಮುಗಿದು ಫೈಲಿಂಗ್ ಸಹಿತ ಇತರ ತಾಂತ್ರಿಕ ಪರಿಶೀಲನೆ ನಡೆದು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಆದರೆ, ಕೆಲವೇ ದಿನಗಳಲ್ಲಿ ಮಳೆಗಾಲ ಬರುತ್ತಿದ್ದು, ಕಾಂಕ್ರೀಟ್ ಹಾಕುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಈ ವೇಳೆ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರಸಭೆ ಸದಸ್ಯ ಗಿರೀಶ್ ಅಂಚನ್ ಉಪಸ್ಥಿತರಿದ್ದರು.