-->
ಉದ್ಯೋಗ ಹಕ್ಕು ಕಸಿದುಕೊಂಡ ಸರ್ಕಾರ

ಉದ್ಯೋಗ ಹಕ್ಕು ಕಸಿದುಕೊಂಡ ಸರ್ಕಾರ

ಲೋಕಬಂಧು ನ್ಯೂಸ್
ಕಾರ್ಕಳ: ರಾಜ್ಯ ಸರಕಾರ ಕಲ್ಲು ಗಣಿಗಾರಿಕೆ ಪರವಾನಿಗೆ ನವೀಕರಣ ಹಾಗೂ ಹೊಸ ಪರ್ಮಿಟ್ ಸ್ಥಗಿತಗೊಳಿಸಿರುವುದರಿಂದ ಕರಾವಳಿ ಜಿಲ್ಲೆಯಲ್ಲಿ ನಿರ್ಮಾಣ ಚಟುವಟಿಕೆ ಅಸ್ತವ್ಯಸ್ಥಗೊಂಡಿದ್ದು, ಸರ್ಕಾರ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಗಣಿಗಾರಿಕೆ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಜಲ್ಲಿ, ಕಲ್ಲು, ಶಿಲೆ, ಕೆತ್ತನೆ ಕಲ್ಲು, ಕೆಂಪು ಕಲ್ಲು, ಮರಳು ಸಹಿತ ಎಲ್ಲ ಗಣಿ ಉತ್ಪಾದಕ ಸಾಮಗ್ರಿಗಳು ಸಿಗದೆ ನಿರ್ಮಾಣ ವಲಯದಲ್ಲಿ ಭಾರಿ ಏರುಪೇರಾಗಿದೆ. ಕಾನೂನು ಸುವ್ಯವಸ್ಥೆ ಪಾಲಿಸಬೇಕಾದ ಪೊಲೀಸರು ಕೊಲೆಗಡುಕರು, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಕೈಗೆ ಕೋಳ ಹಾಕುವ ಬದಲು ನಿರ್ಮಾಣ ವಲಯದ ಕುಶಲ ಕಾರ್ಮಿಕರನ್ನು ಠಾಣೆಯಲ್ಲಿ ಕುಳ್ಳಿರಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪರವಾನಿಗೆ ನೆಪದಲ್ಲಿ ಕಾರ್ಮಿಕರ ಲಾರಿ, ಟಿಪ್ಪರ್, ಪಿಕಪ್ ಇನ್ನಿತರ ವಾಹನ, ಕತ್ತಿ, ಪಿಕ್ಕಾಸು, ಸುತ್ತಿಗೆಗಳನ್ನು ವಶಪಡಿಸಿಕೊಂಡು ದುಡಿಯದಂತೆ ಮಾಡಿ ಅನ್ನ ಕಿತ್ತುಕೊಳ್ಳುವ ಕೆಲಸವನ್ನು ಸರಕಾರ ಪೊಲೀಸರ ಮೂಲಕ ಮಾಡಿಸುತ್ತಿದೆ. ಮಟ್ಕಾ, ಜುಗಾರಿ ಇತ್ಯಾದಿ ಕಾನೂನು ಬಾಹಿರ ಕೃತ್ಯ ನಡೆಸುವವರು ಸಾರ್ವಜನಿಕವಾಗಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಆದರೆ, ಶ್ರಮಿಕ ವರ್ಗವನ್ನು ಸಲ್ಲದ ನೆಪವೊಡ್ಡಿ ಠಾಣೆಗೆ ಕರೆಸಿಕೊಳ್ಳಲಾಗುತ್ತಿದೆ.


ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿದ್ದರಿಂದ ಸಾವಿರಾರು ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಟ್ಟಡ ನಿರ್ಮಾಣ ಮತ್ತು ಮಳೆಗಾಲದ ತುರ್ತು ದುರಸ್ತಿಗೆ ರಸ್ತೆ ಕಾಮಗಾರಿ ಶಾಖೆಗಳಲ್ಲಿ ನಿರ್ಮಾಣ ಸಾಮಗ್ರಿ ಕೊರತೆ ಉಂಟಾಗಿದೆ. ಜನಸಾಮಾನ್ಯರಿಗೆ ಮನೆ ರಿಪೇರಿ ಇತರ ಚಟುವಟಿಕೆ ಸಾಧ್ಯವಾಗುತಿಲ್ಲ. ಸ್ಥಳೀಯ ಆರ್ಥಿಕತೆಯೂ ಕುಂಠಿತವಾಗಿದೆ.


ರಾಜ್ಯ ಸರಕಾರದ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು. ಜೀವನ ಸಾಗಿಸಲು ಪರದಾಡುವ ಸ್ಥಿತಿಯಿದೆ. ಶಾಲೆಗಳು ಪುನಾರಂಭದ ಹೊತ್ತಿನಲ್ಲಿದ್ದು, ಫೀಸ್ ಕಟ್ಟಲು ಹಣ ಹೊಂದಿಸಲು ಸಾಧ್ಯವಿಲ್ಲದೆ ಕಾರ್ಮಿಕರು ಪರದಾಡುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.


ಈ ಎಲ್ಲ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಅಪರೂಪದ ಅತಿಥಿಗಳಾಗಿದ್ದಾರೆ. ಕಾಟಾಚಾರಕ್ಕೆ ಉಸ್ತುವಾರಿ ಕೆಲಸ ಮಾಡುತ್ತಿದ್ದಾರೆ. ಯಾವ ಸಮಸ್ಯೆಗಳಿಗೂ ಅವರಿಂದ ಪರಿಹಾರ ದೊರೆತಿಲ್ಲ.


ಗಣಿಗಾರಿಕೆ, ಪರವಾನಿಗೆ ನವೀಕರಣ ಸಂಬಂಧ ಈ ಹಿಂದೆ  ಅಧಿವೇಶನದಲ್ಲಿ ತಾನು ಸರಕಾರದ ಗಮನ ಸೆಳೆದಿದ್ದು, ಅನೇಕ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಶಾಸಕ ಸುನಿಲ್ ಕುಮಾರ್ ಟೀಕಿಸಿದ್ದಾರೆ.

Ads on article

Advertise in articles 1

advertising articles 2

Advertise under the article