ಪ್ರಚಾರದ ಗೀಳಿಗೆ ಅಮಾಯಕರು ಬಲಿ
Tuesday, June 17, 2025
ಲೋಕಬಂಧು ನ್ಯೂಸ್, ಬೆಂಗಳೂರು
ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಸಿಎಂ, ಡಿಸಿಎಂ ಮತ್ತು ಗೃಹಸಚಿವರ ರಾಜೀನಾಮೆಗೆ ಒತ್ತಾಯಿಸಿ ಇಲ್ಲಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಗೆಲುವಿನ ಸಂಭ್ರಮಾಚರಣೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆಂಬ ಮಾಹಿತಿ ಇದ್ದರೂ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಆಯೋಜಿಸಿ ಭದ್ರತೆ ನೀಡಲಾಗದೇ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಪ್ರಚಾರದ ಗೀಳಿಗೆ ಅಮಾಯಕರ ಬಲಿ ಪಡೆದ ಸರ್ಕಾರದ ಜನ ಕಂಟಕ ನಿಲುವನ್ನು ಖಂಡಿಸಲಾಯಿತು.ಜೂನ್ 4ರಂದು ರಾಜ್ಯ ಹಾಗೂ ದೇಶಾದ್ಯಂತ ಆರ್.ಸಿ.ಬಿ. ಸಂಭ್ರಮಾಚರಣೆ ನಡೆಯುತ್ತಿದ್ದರೆ, ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆ ಪೈಪೋಟಿ ನಡೆಯುತ್ತಿತ್ತು. ಆರ್.ಸಿ.ಬಿ ಗೆಲುವಿನ ಸಂಭ್ರಮದ ಮೂಲಕ ನಮ್ಮ ಸರ್ಕಾರದ ಜನಪ್ರಿಯತೆ ಹೆಚ್ಚಿಸಿಕೊಳ್ಳಬೇಕು ಎಂಬ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ ಹಠ ಹಾಗೂ ಚಟಕ್ಕೆ ಬಿದ್ದ ಉಪಮುಖ್ಯಮಂತ್ರಿಯಂತೂ ಏರ್‌ಪೋರ್ಟ್ ಗೆ ಧಾವಿಸಿ ಕ್ರೀಡಾಪಟುಗಳನ್ನು ಸ್ವಾಗತಿಸಿ, ಕ್ರೀಡಾಂಗಣದಲ್ಲಿ ಕಪ್ ಎತ್ತಿ ಹಿಡಿದು ತಾವೇ ಗೆದ್ದವರಂತೆ ಬಿಂಬಿಸಿಕೊಂಡರು.
ಈ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ವರದಿ ನೀಡಿದ್ದರೂ ಅದನ್ನು ಲೆಕ್ಕಿಸದೇ ಪುಕ್ಕಟೆ ಪ್ರಚಾರದ ಗೀಳಿಗೆ ಬಿದ್ದು ಎರಡು ಕಡೆಗಳಲ್ಲಿ ಕಾರ್ಯಕ್ರಮ ನಡೆಸಿದ್ದರ ಪರಿಣಾಮವಾಗಿ 11 ಮುಗ್ಧ ಜೀವಗಳ ಬಲಿ ತೆಗೆದುಕೊಂಡರು.
ಈಗಲಾದರೂ ಭಂಡತನ ಬಿಟ್ಟು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ವಿಜಯೇಂದ್ರ ಆಗ್ರಹಿಸಿದರು.