ಭೂಗರ್ಭ ಎಲ್‌ಪಿಜಿ ಸ್ಥಾವರ ಸ್ಥಾಪನೆ ಯಶಸ್ವಿ
Thursday, June 19, 2025
ಲೋಕಬಂಧು ನ್ಯೂಸ್, ಮಂಗಳೂರು
ದೇಶದಲ್ಲೇ ಅತಿ ದೊಡ್ಡ ಭೂಗರ್ಭ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸ್ಥಾವರವನ್ನು ಮಂಗಳೂರಿನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಭೂಗರ್ಭ ಸುರಂಗದಲ್ಲಿ 80 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಅನಿಲ ಸಂಗ್ರಹಿಸಬಹುದಾಗಿದೆ.ಭೂಗರ್ಭ ಸಂಗ್ರಹಣ ವ್ಯವಸ್ಥೆಯ ಸುರಕ್ಷತೆ ಪರಿಶೀಲಿಸಲು ಮೇ 9ರಿಂದ ಜೂನ್ 6ರ ವರೆಗೆ ಕ್ಯಾವರ್ನ್ ಆಕ್ಸೆಸ್ಟೆನ್ಸ್ ಟೆಸ್ಟ್-ಕ್ಯಾಟ್ ಕೈಗೊಳ್ಳಲಾಗಿದೆ ಎಂದು ಈ ಕಾಮಗಾರಿ ಕೈಗೊಂಡ ಮೇಘಾ ಇಂಜಿನಿಯರಿಂಗ್‌ನ ತಜ್ಞರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಂಗಳೂರಿನಲ್ಲಿ ಇದನ್ನು ಸ್ಥಾಪಿಸಿದ್ದು, ವಿಶಾಖಪಟ್ಟಣದಲ್ಲಿ ಕೂಡಾ ಇದೇ ರೀತಿಯ ಭೂಗರ್ಭ ಸಂಗ್ರಹಾಗಾರವಿದೆ. ಯಾವುದೇ ತುರ್ತು ಸನ್ನಿವೇಶಗಳಲ್ಲಿ ದೇಶಕ್ಕೆ ಬೇಕಾದ ಅನಿಲ ಬೇಡಿಕೆಯನ್ನು ಪೂರೈಸಲು ಇದು ಸಹಾಯ ಮಾಡುತ್ತದೆ.
ಮಂಗಳೂರು ಪ್ರದೇಶದಲ್ಲಿ ಇದು ಮೂರನೇ ಭೂಗರ್ಭ ತೈಲ ಸಂಗ್ರಹಣಾ ಘಟಕವಾಗಿದೆ. ಈಗಾಗಲೇ ಪೆರ್ಮುದೆಯಲ್ಲಿ 1.5 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಮತ್ತು ಉಡುಪಿ ಜಿಲ್ಲೆಯ ಪಾದೂರಿನಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯದ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಹೊಸ ಘಟಕವನ್ನು ನಿರ್ದಿಷ್ಟವಾಗಿ ಎಲ್‌ಪಿಜಿ ಸಂಗ್ರಹಣೆಗಾಗಿಯೇ ನಿರ್ಮಿಸಲಾಗಿದೆ.
ವಿಶಾಖಪಟ್ಟಣ ಎಲ್‌ಪಿಜಿ ಸಂಗ್ರಹಣಾ ಘಟಕ 60 ಸಾವಿರ ಟನ್ ಸಾಮರ್ಥ್ಯ ಹೊಂದಿದ್ದರೆ, ಮಂಗಳೂರಿನ ಈ ಘಟಕ 80 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ ಭಾರತದಲ್ಲೇ ಅತಿ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ಸರ್ಕಾರ 2018ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದ್ದು, 2019ರಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಇನ್ನು ಮುಂದೆ, ಸಮುದ್ರದಲ್ಲಿರುವ ತೇಲುವ ಜೆಟ್ಟಿ ಮೂಲಕ ಎಲ್‌ಪಿಜಿಯನ್ನು ಈ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ಅದಕ್ಕಾಗಿ ಅಗತ್ಯವಿರುವ ಪೈಪ್‌ಲೈನ್ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ.
ಘಟಕವನ್ನು 500 ಮೀಟರ್ ಆಳದಲ್ಲಿ ದೊಡ್ಡ ಕಲ್ಲನ್ನು ಕೊರೆದು ಸುರಂಗ ನಿರ್ಮಿಸಲಾಗಿದೆ. ಈ ಯೋಜನೆಗೆ 800 ಕೋಟಿ ರೂ. ವೆಚ್ಚ ತಗುಲಿದೆ.