.jpg)
ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ಆರಂಭ
Wednesday, June 18, 2025
ಲೋಕಬಂಧು ನ್ಯೂಸ್, ಉಡುಪಿ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವಲ್ಲಿ ಗಮನಾರ್ಹ 25 ವರ್ಷಗಳ ಸೇವೆಯನ್ನು ಗುರುತಿಸುವ ಮೂಲಕ 2025ನೇ ಸಾಲಿನ ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ಪ್ರಾರಂಭಿಸಿರುವುದಾಗಿ ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹೇಳಿದರು.
ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ, ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾರತದ ಆರೋಗ್ಯ ಮತ್ತು ಶಿಕ್ಷಣ ಕಾಳಜಿ ಹೊಂದಿದ್ದ ಡಾ.ಟಿ.ಎಂ.ಎ. ಪೈ ದೂರದರ್ಶಿತ್ವವನ್ನು ಸ್ಮರಿಸಿದರು. ಮಾಹೆ ಕುಲಪತಿ ಡಾ. ರಾಮದಾಸ ಪೈ ಮಾರ್ಗದರ್ಶನದಲ್ಲಿ 2000ರಲ್ಲಿ ಪ್ರಾರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಇದೀಗ ರಜತ ಮಹೋತ್ಸವದ ಮೈಲಿಗಲ್ಲು ತಲುಪಿದೆ. 25 ವರ್ಷಗಳಲ್ಲಿ ಕೋಟ್ಯಂತರ ಫಲಾನುಭವಿಗಳ ಜೀವನ ಮುಟ್ಟಿದೆ ಎಂದರು.
2000ನೇ ಇಸವಿಯಲ್ಲಿ 3,200 ಕುಟುಂಬಗಳು ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯಡಿ ನೋಂದಣಿ ಮಾಡಿದ್ದು, ಗತ ಹಣಕಾಸು ವರ್ಷದಲ್ಲಿ 1.25 ಲಕ್ಷ ಕುಟುಂಬಗಳು ನೋಂದಾಯಿಸಿವೆ. 6.72 ಲಕ್ಷ ಸದಸ್ಯರನ್ನು ಹೊಂದಲಾಗಿದೆ. ಕಾರ್ಡುದಾರರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆ, ಕಾರ್ಕಳ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರು ಮತ್ತು ಅತ್ತಾವರ ಕೆಎಂಸಿ ಆಸ್ಪತ್ರೆ, ಕಟೀಲು ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ, ಗೋವಾದ ಮಣಿಪಾಲ ಆಸ್ಪತ್ರೆ ಹಾಗೂ ಮಣಿಪಾಲ ಮತ್ತು ಮಂಗಳೂರಿನ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿ ಪ್ರಯೋಜನ ಪಡೆಯಬಹುದು ಎಂದರು.
ಮಾಹೆ ಮಣಿಪಾಲ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ)ಎಂ.ಡಿ. ವೆಂಕಟೇಶ್, ಒಂದು ವರ್ಷ ಮತ್ತು ಎರಡು ವರ್ಷಗಳ ಸದಸ್ಯತ್ವ ಆಯ್ಕೆ ನೀಡಲಾಗುತ್ತಿದ್ದು ಸಮಾಜದ ಎಲ್ಲಾ ವರ್ಗಗಳಿಗೆ ಕೈಗೆಟುಕುವ ದರ ನಿಗದಿಪಡಿಸಲಾಗಿದೆ ಎಂದರು.
ಆನ್'ಲೈನ್'ನಲ್ಲಿ www.manipalhealthcard.com ನಲ್ಲಿ ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9980854700 ಅಥವಾ 0820 2923748ಗೆ ಕರೆ ಮಾಡಬಹುದು ಎಂದು ವಿವರಿಸಿದರು.
ಮಾಹೆ ಸಹ ಉಪಕುಲಪತಿ ಡಾ.ಶರತ್ ಕೆ. ರಾವ್, ಮಣಿಪಾಲ ಕೆಎಂಸಿ ಡೀನ್ ಡಾ.ಅನಿಲ್ ಕೆ.ಭಟ್, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್, ಮಾರುಕಟ್ಟೆ ವ್ಯವಸ್ಥಾಪಕ ಮೋಹನ ಶೆಟ್ಟಿ ಮೊದಲಾದವರಿದ್ದರು.
ಸದಸ್ಯತ್ವ ವಿವರ
ಮಣಿಪಾಲ್ ಆರೋಗ್ಯ ಕಾರ್ಡ್ ಒಂದು ವರ್ಷದ ಯೋಜನೆಯಲ್ಲಿ ಕಾರ್ಡ್ ಸದಸ್ಯತ್ವ ಒಬ್ಬರಿಗೆ 350 ರೂ. ಕೌಟಂಬಿಕ ಕಾರ್ಡ್ (ಕಾರ್ಡುದಾರ, ಅವರ ಸಂಗಾತಿ, 25 ವರ್ಷದೊಳಗಿನ ಮಕ್ಕಳು) 700 ರೂ. ಮತ್ತು ಕುಟುಂಬ ಪ್ಲಸ್ ಯೋಜನೆ (ಕಾರ್ಡುದಾರ, ಅವರ ಸಂಗಾತಿ, 25 ವರ್ಷದೊಳಗಿನ ಮಕ್ಕಳು ಮತ್ತು ನಾಲ್ವರು ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ)ಗೆ 900 ರೂ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ 600 ರೂ., ಕುಟುಂಬಕ್ಕೆ 950 ರೂ. ಮತ್ತು ಕೌಟಂಬಿಕ ಪ್ಲಸ್ ಯೋಜನೆ 1.100 ರೂ.
ರಿಯಾಯಿತಿ ಪ್ರಯೋಜನಗಳು
* ತಜ್ಞ ಮತ್ತು ಸೂಪರ್-ಸ್ಪೆಷಲಿಸ್ಟ್ ಸಮಾಲೋಚನೆ ಶುಲ್ಕಗಳಲ್ಲಿ 50 ಶೇ. ರಿಯಾಯಿತಿ (ಓಪಿಡಿ ದಿನಗಳಲ್ಲಿ)
* ರೋಗ ನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಮೇಲೆ 25 ಶೇ. ರಿಯಾಯಿತಿ
* ರೇಡಿಯಾಲಜಿ, ಓಪಿಡಿ ಕಾರ್ಯವಿಧಾನ ಮತ್ತು ಮಧುಮೇಹ ಪಾದದ ಆರೈಕೆ 20 ಶೇ. ರಿಯಾಯಿತಿ
* ಡಯಾಲಿಸಿಸ್ ಶೇ. 100 ರಿಯಾಯಿತಿ
* ಆಸ್ಪತ್ರೆ ಔಷಧಿಗಳ ಮೇಲೆ 10 ಶೇ.ವರೆಗೆ ರಿಯಾಯಿತಿ
* ಸಾಮಾನ್ಯ ವಾರ್ಡ್ ಒಳರೋಗಿಗಳ ಬಿಲ್'ನಲ್ಲಿ 25 ಶೇ. ರಿಯಾಯಿತಿ (ಉಪಭೋಗ್ಯ ವಸ್ತುಗಳು ಮತ್ತು ಪ್ಯಾಕೇಜ್'ಗಳನ್ನು ಹೊರತುಪಡಿಸಿ)