
ಪ್ರಥಮೈಕಾದಶೀ- ಶಯನೈಕಾದಶಿ
Sunday, July 6, 2025
ಪ್ರಥಮೈಕಾದಶೀ- ಶಯನೈಕಾದಶಿ
ಸನಾತನ ಸಂಸ್ಕೃತಿಯಲ್ಲಿ ಏಕಾದಶಿ ದಿನಕ್ಕೆ ವಿಶೇಷ ಸ್ಥಾನ- ಮಾನವಿದೆ. ಆಷಾಢ ಶುದ್ಧ ಏಕಾದಶಿ ಪ್ರಥಮ ಏಕಾದಶಿ ಎಂದೇ ಪ್ರಸಿದ್ಧಿ. ಈ ದಿನದ ಬಗ್ಗೆ ಬೆಳಕು ಚೆಲ್ಲುತ್ತಿದೆ ಈ ಲೇಖನ.
ಆಷಾಢ ಶುದ್ಧ ಏಕಾದಶಿ ಶಯನೈಕಾದಶಿ. ಇದು ಪ್ರಥಮೈಕಾದಶಿಯೂ ಹೌದು.
ಸಂಸ್ಕೃತದಲ್ಲಿ ಮಲಗುವುದಕ್ಕೆ ‘ಶಯನಿಸುವುದು’ ಎನ್ನುತ್ತಾರೆ. ಆದ್ದರಿಂದ ಈ ಏಕಾದಶಿಯನ್ನು ‘ಶಯನೀ ಏಕಾದಶಿ’ ಎಂದು ಕರೆಯುತ್ತಾರೆ. ಇದು ಆಷಾಢ ಮಾಸದ ಪ್ರಥಮ ಏಕಾದಶಿಯಾಗಿರುವುದರಿಂದ ಇದನ್ನು ‘ಪ್ರಥಮ ಏಕಾದಶಿ’ ಎನ್ನಲಾಗಿದೆ.
ಶಯನೈಕಾದಶಿಯ ದಿನದಂದು ವಿಷ್ಣು ಭಕ್ತರು ಸಕಲ ಲೋಕ ಪರಿಪಾಲಕನಾದ ಶ್ರೀ ಮಹಾವಿಷ್ಣುವಿನ ‘ಶಯನೋತ್ಸವ’ವನ್ನು ಆಚರಿಸುತ್ತಾರೆ. ಸನ್ಯಾಸಿಗಳು ಚಾತುರ್ಮಾಸ್ಯ ವ್ರತದ ಸಂಕಲ್ಪ ಮಾಡುತ್ತಾರೆ. ಇದೇ ದಿನ ವೈಷ್ಣವರು ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುತ್ತಾರೆ.
ಶಯನೀ ಏಕಾದಶಿಯಂದು ಮಲಗಿದ ಮಹಾವಿಷ್ಣು ನಾಲ್ಕು ತಿಂಗಳ ನಿದ್ದೆಯ ನಂತರ ಕಾರ್ತೀಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಎದ್ದೇಳುತ್ತಾನೆ.
ಸಂಸ್ಕೃತದಲ್ಲಿ ಎದ್ದೇಳುವುದಕ್ಕೆ ‘ಉತ್ಥಾನ’ ಎನ್ನುತ್ತಾರೆ. ಹೀಗಾಗಿ ಆ ದಿನವನ್ನು ‘ಉತ್ಥಾನ ದ್ವಾದಶಿ’ ಎಂದು ಕರೆಯುತ್ತಾರೆ.
ಕ್ಷೀರಾಬ್ಧಿಯಲ್ಲಿ ಮಲಗಿದ್ದ ಭಗವಂತ ಎದ್ದೇಳುವ ಆ ದಿನವನ್ನೇ ನಮ್ಮಲ್ಲಿ ಕೆಲವರು 'ಕ್ಷೀರಾಬ್ಧಿ' ಎಂದು ಕರೆಯುತ್ತಾರೆ.
ಹೀಗೆ ಮಹಾವಿಷ್ಣು ನಿದ್ದೆಯಿಂದ ಎದ್ದೇಳುವ ದಿನವೇ ನಮ್ಮ ತುಳಸೀ ಪೂಜೆಯ ದಿನ. ಅಂದರೆ, ತುಳಸಿಯೊಡನೆ ವಿಷ್ಣುವಿನ ವಿವಾಹ ನಡೆಸುವ ತುಳಸೀ ಕಲ್ಯಾಣದ ದಿನವಾಗಿದೆ.
ಪತಿ ಎದ್ದೇಳುವ ಮುನ್ನವೇ ಪತ್ನಿ ಎದ್ದೇಳುವುದು ಸ್ವಾಭಾವಿಕ ಅಲ್ಲವೇ ? ಅಂತೆಯೇ ಮಹಾವಿಷ್ಣುವಿನ ಪತ್ನಿ ಮಹಾಲಕ್ಷ್ಮಿ ಉತ್ಥಾನ ದ್ವಾದಶಿಗಿಂತ ಪೂರ್ವದಲ್ಲಿ ಬರುವ ಅಮಾವಾಸ್ಯೆ ಅಂದರೆ ದೀಪಾವಳಿಯ ದಿನದಂದೇ ಎದ್ದೇಳುತ್ತಾಳೆ ಎಂಬುದು ನಂಬಿಕೆ. ಹೀಗಾಗಿ ಅದೇ ದಿನದಂದು ಲಕ್ಷ್ಮಿಗೆ ಪೂಜೆ ಮಾಡುತ್ತೇವೆ. ಅದೇ ದೀಪಾವಳಿಯ ದಿನ ಅಥವಾ ಧನಲಕ್ಷ್ಮೀ ಪೂಜೆಯ ದಿನ.
ಆಷಾಢ ಶುದ್ಧ ಏಕಾದಶಿಯಿಂದ ಕಾರ್ತೀಕ ಶುದ್ಧ ದಶಮಿ ವರೆಗಿನ ಈ ನಾಲ್ಕು ತಿಂಗಳ ಅವಧಿ ‘ಚಾತುರ್ಮಾಸ್ಯ’ ಎಂದೇ ಪ್ರಸಿದ್ಧಿ. ಈ ಅವಧಿಯಲ್ಲಿ ಸಾಂಪ್ರದಾಯಿಕ ಮಠಗಳಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಇರುತ್ತದೆ. ಶಯನೀ ಏಕಾದಶಿ ಚಾತುರ್ಮಾಸ್ಯ ವ್ರತದ ಆರಂಭದ ದಿನವಾದರೆ, ಉತ್ಥಾನ ದ್ವಾದಶಿ ಚಾತುರ್ಮಾಸ್ಯದ ಕೊನೆಯ, ಮಂಗಲಾಚರಣೆಯ ದಿನವಾಗಿರುತ್ತದೆ.
ಈ ಅವಧಿಯಲ್ಲಿ ಸಂನ್ಯಾಸ ಪೀಠಾಲಂಕೃತ ಯತಿಗಳು ಯಾವುದಾದರೂ ಒಂದೇ ಸ್ಥಾನದಲ್ಲಿದ್ದು , ಅಲ್ಲಿ ಜಪತಪಾದಿ ಕೈಂಕರ್ಯಗಳಲ್ಲಿ ತೊಡಗಿಕೊಂಡು ತಮ್ಮ ಶಿಷ್ಯವೃಂದವನ್ನು ಪೊರೆಯುವಲ್ಲಿ ನಿರತರಾಗಿರುತ್ತಾರೆ.