-->
Kapu: ನಾದದಲ್ಲಿ ಜಲೀಲ್ ಲೀನ

Kapu: ನಾದದಲ್ಲಿ ಜಲೀಲ್ ಲೀನ

ಕಾಪು, ನ.13 (ಲೋಕಬಂಧು ವಾರ್ತೆ): ಕಾಪು ಸಾವಿರ ಸೀಮೆಯ ಪಾರಂಪರಿಕ ನಾಗಸ್ವರ ವಾದಕ ಶೇಖ್ ಜಲೀಲ್ ಸಾಹೇಬ್ ಹೃದಯಾಘಾತ ಸೋಮವಾರ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.ಮೃತರು, ಪತ್ನಿ, ಮಗಳು, ಸಹೋದರನನ್ನು ಅಗಲಿದ್ದಾರೆ.

ಶನಿವಾರ ಕೊಪ್ಪಲಂಗಡಿಯಲ್ಲಿ ನಡೆದ ಮುಳ್ಳಮುಟ್ಟೆ, ರವಿವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ದೀಪಾವಳಿ ಸಂಭ್ರಮ ಮತ್ತು ಬಲಿ ಹೊರಡುವ ಸಂದರ್ಭದಲ್ಲೂ ಜಲೀಲ್  ನಾಗಸ್ವರ ಸೇವೆ ನೀಡಿದ್ದರು.

ಸೋಮವಾರ ಮುಂಜಾನೆ ನಾಗಸ್ವರ ಹೆಗಲಿಗೇರಿಸಿಕೊಂಡು ಮನೆಯಿಂದ ಹೊರಗೆ ಹೋಗಿದ್ದು, ಹೋಟೆಲ್ ವೊಂದರಲ್ಲಿ ಚಹಾ ಕುಡಿಯಲು ಕುಳಿತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅಸು ನೀಗಿದರು.

ಕಾಪು ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಕಾಪು ಮೂರನೇ ಮಾರಿಗುಡಿ, ಕಾಪು ಮಾರಿಯಮ್ಮ ದೇವಿ ಸನ್ನಿಧಿ ಹಾಗೂ ಕಾಪು ಸಾವಿರ ಸೀಮೆಯ ಹೆಚ್ಚಿನ ದೇವಸ್ಥಾನ, ಗರಡಿ, ದೇವಸ್ಥಾನಗಳಲ್ಲಿ ನಾಗಸ್ವರ ವಾದಕರಾಗಿ ಸೇವೆ ನೀಡುತ್ತಿದ್ದರು.

ಅಜ್ಜ ಇಮಾಮ್ ಸಾಹೇಬ್, ತಂದೆ ಬಾಬನ್ ಸಾಹೇಬ್ ಕೂಡಾ ನಾಗಸ್ವರ ವಾದಕರಾಗಿದ್ದು, ಅವರಿಂದ ಬಳುವಳಿಯಾಗಿ ಬಂದ ನಾಗಸ್ವರ ವಾದನ ವಿದ್ಯೆಯನ್ನು ಕಳೆದ 40 ವರ್ಷದಿಂದ ಜಲೀಲ್ ಸಾಹೇಬ್ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದರು.

ಹಿಂದೂ ಧರ್ಮ, ಸಂಪ್ರದಾಯ, ಸಂಸ್ಕೃತಿಯನ್ನು ಪ್ರೀತಿಸಿ, ಗೌರವಿಸುತ್ತಿದ್ದ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸಂತಾಪ
ನಾಗಸ್ವರ ವಾದಕ ಜಲೀಲ್ ಸಾಹೇಬ್ ಅಕಾಲಿಕ ನಿಧನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ‌ ಆರ್. ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರುಣ್ ಕುಮಾರ್ ಬಿ.ಕೆ., ದೇವಳದ ತಂತ್ರಿ ಅನಂತರಾಮ ತಂತ್ರಿ, ಕೆ.ಪಿ. ಶ್ರೀನಿವಾಸ ತಂತ್ರಿ ಮಡುಂಬು, ಗಣ್ಯರಾದ ಕೆ.ಪಿ. ಆಚಾರ್ಯ, ಕೆ. ವಾಸುದೇವ ಶೆಟ್ಟಿ, ಗಂಗಾಧರ ಸುವರ್ಣ, ಕಾಪು ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಕಲ್ಯ ಲಕ್ಷ್ಮೀಶ‌ ತಂತ್ರಿ, ರವಿ ಭಟ್ ಮಂದಾರ, ಮನೋಹರ ಶೆಟ್ಟಿ ಕಾಪು, ಕೆ. ಲೀಲಾಧರ ಶೆಟ್ಟಿ, ಡಾ. ಪ್ರಶಾಂತ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ, ನವೀನ್ ಚಂದ್ರ ಸುವರ್ಣ ಸೇರಿದಂತೆ ವಿವಿಧ ದೇವಸ್ಥಾನ, ದೈವಸ್ಥಾನಗಳ ಮುಖ್ಯಸ್ಥರು, ಆಡಳಿತ ಮಂಡಳಿ, ಗುರಿಕಾರರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article