.jpg)
ಸ್ವರ್ಣ ಗದ್ದುಗೆ ಮಂಡಿತ ಶ್ರೀ ಉಚ್ಚಂಗಿ ದೇವಿ ವೈಭವದ ಬ್ರಹ್ಮಕುಂಭಾಭಿಷೇಕ ಸಂಪನ್ನ
Tuesday, March 4, 2025
ಲೋಕಬಂಧು ನ್ಯೂಸ್
ಕಾಪು: ಇಲ್ಲಿನ ಶ್ರೀ ಹೊಸಮಾರಿಗುಡಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಸ್ವರ್ಣಗದ್ದುಗೆಯಲ್ಲಿ ಮಂಡಿಸಿರುವ ಶ್ರೀ ಉಚ್ಚಂಗಿ ದೇವಿಗೆ ಬ್ರಹ್ಮಕಲಶಾಭಿಷೇಕ ವೈಭವದಿಂದ ನಡೆಯಿತು.
ಕೊರಂಗ್ರಪಾಡಿ ವೇ.ಮೂ. ಕೆ.ಜಿ. ರಾಘವೇಂದ್ರ ತಂತ್ರಿ ಮಾರ್ಗದರ್ಶನದಲ್ಲಿ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ದೇವಳದ ಪ್ರಧಾನ ಆರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಹಾಗೂ ವೈದಿಕ ವೃಂದದವರು ಬೆಳಿಗ್ಗೆ 8 ಗಂಟೆ ಸುಮೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನಡೆಸಿದರು.
ಧಾರ್ಮಿಕ ಕಾರ್ಯದಂಗವಾಗಿ ಪೂರ್ವಾಹ್ನ ಭುವನೇಶ್ವರೀ ಸಹಸ್ರನಾಮಮಂತ್ರಯಾಗ, ವಿಜಯಪ್ರದ ಜಯಸೂಕ್ತಯಾಗ, ಚಾಮುಂಡಾಕಲಾ ಮಾತೃಕಾಮಂಡಲಾರಾಧನಮ್, ಚಂಡಿಕಾಸಪ್ತಶ್ಲೋಕಿ ಸಪ್ತಶತೀಯಾಗ, ಆಶ್ವಮೇಧಸೂಕ್ತಯಾಗ, ಪ್ರತ್ಯಕ್ಷ ಅಶ್ವಪೂಜಾ, ಉಚ್ಚಂಗಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಕಾರ್ಯಗಳು ನಡೆದವು.
ಸಂಜೆ ಸಾಕ್ಷಾತ್ ಗಂಗಾಭಾಗೀರಥೀ ಪೂಜನಮ್, ಕಾಳೀಕಲಾಮಾತೃಕಾ ಮಂಡಲೋಪಾಸನಮ್, ಶ್ರೀಮಾರಿಯಮ್ಮ ದೇವಿಯ ಪಂಚವಿಂಶತಿದ್ರವ್ಯಮೀಳಿತ ಸಹಸ್ರ ಕಲಶಪೂರಣಮ್, ಬ್ರಹ್ಮಕಲಶಾಧಿವಾಸಪೂಜಾ, ನವಕುಂಡಲಾಧಿವಾಸಯಾಗ, ಶ್ರೀಭೈರವೀಮಾತೃಕಾ ಮಂಡಲೋಪಾಸನಮ್, ಸರ್ವಮಂಗಲಕರ ಚಂಡೀಪುರಶ್ಚರಣಮ್, ಮಂಡಲಪೂಜನಮ್, ಶ್ರೀತಾರಾಕಲಾಮಾತೃಕಾಮಂಡಲಪೂಜನಮ್ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ.ದೇವಿಪ್ರಸಾದ್ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ವಿವಿಧ ಸಮಿತಿಗಳ ಪದಾಧಿಕಾರಿಗಳು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.