ಮಾ.4: ಗ್ರಾ.ಪಂ. ಅಧಿಕಾರ ಉಳಿವಿಗಾಗಿ ಹಕ್ಕೊತ್ತಾಯ
Sunday, March 2, 2025
ಲೋಕಬಂಧು ನ್ಯೂಸ್
ಉಡುಪಿ: ಗ್ರಾಮ ಪಂಚಾಯತ್'ಗಳ ಅಧಿಕಾರದ ಉಳಿವಿಗಾಗಿ ಕುಂದಾಪುರ ತಾಲೂಕು ಪಂಚಾಯತ್'ರಾಜ್ ಒಕ್ಕೂಟ ಹಾಗೂ ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ ವತಿಯಿಂದ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು ಮಾರ್ಚ್ 4ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ಮಾರ್ಚ್ 1ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್'ರಾಜ್ ಕಾಯ್ದೆಯನ್ವಯ ಗ್ರಾಮ ಪಂಚಾಯತ್, ಸ್ಥಳೀಯ ಸ್ವಯಂ ಸರ್ಕಾರವಾಗಿದೆ. ಆದರೆ, ಪ್ರಸ್ತುತ ವಿವಿಧ ಹಂತದಲ್ಲಿ ಅಧಿಕಾರಶಾಹಿ ಆಡಳಿತ ವ್ಯವಸ್ಥೆಯಿಂದಾಗಿ ಗ್ರಾ.ಪಂ.ಗಳು ಸ್ಥಳೀಯ ಸ್ವಯಂ ಸರ್ಕಾರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಗ್ರಾ.ಪಂ.ಗಳು ವಿವಿಧ ಹಂತದ ಸರ್ಕಾರಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸದೇ ಸಂವಿಧಾನದ ಆಶಯ ಹಾಗೂ ಕಾಯ್ದೆಯ ಆಶಯದಂತೆ ಸ್ಥಳೀಯ ಸ್ವಯಂ ಸರ್ಕಾರವಾಗಿ ಉಳಿಯಬೇಕಾದರೆ ಎಲ್ಲರ ಒಕ್ಕೊರಲ ಧ್ವನಿ, ಹೋರಾಟ ಅತ್ಯಗತ್ಯ ಎಂದರು.
ಗ್ರಾ.ಪಂ.ಗಳಲ್ಲಿ 2017ರಿಂದ ಹೊಸ ಹುದ್ದೆಯಾಗಲೀ ಅಥವಾ ತೆರವಾದ ಸ್ಥಾನಕ್ಕೆ ಯಾವುದೇ ಸಿಬ್ಬಂದಿಗಳ ನೇಮಕವಾಗಿಲ್ಲ. ಅದರಿಂದ ಪಂಚಾಯತ್ ಆಡಳಿತಕ್ಕೆ ತೊಂದರೆ ಆಗುತ್ತಿದೆ.
25 ಸೆಂಟ್ಸ್ ವಿಸ್ತೀರ್ಣದ ವರೆಗಿನ ಜಮೀನಿಗೆ ಏಕ ನಿವೇಶನ (ಸಿಂಗಲ್ ಲೇಔಟ್) ನಕ್ಷೆ/ ವಿನ್ಯಾಸಗಳಿಗೆ ಮೊದಲಿನಂತೆ ಅನುಮೋದನೆ ನೀಡುವ ಅಧಿಕಾರ ಗ್ರಾ.ಪಂ.ಗೆ ಇರಬೇಕು. ಅಧ್ಯಕ್ಷರು ಹಾಗೂ ಆರೋಗ್ಯ ಸಹಾಯಕ/ ವೈದ್ಯಾಧಿಕಾರಿ ಸಹಿ ಹಣಕಾಸು ನಿರ್ವಹಣೆಗೆ ಕಡ್ಡಾಯ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ನರೇಗಾ ಯೋಜನೆಯಲ್ಲಿ ವರ್ಷವೊಂದರಲ್ಲಿ 10 ಸಾವಿರ ಮಾನವ ದಿನ ಸೃಜಿಸಿದರೆ ನರೇಗಾ ಕೆಲಸಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಳ್ಳಬಹುದು ಎಂದಿದೆ. ಆದರೆ, 10 ಸಾವಿರಕ್ಕಿಂತ ಜಾಸ್ತಿ ಸೃಜಿಸಿ, ಕಾಮಗಾರಿ ನಡೆಸಿದರೂ ಅನೇಕ ಪಂಚಾಯತ್'ಗಳಲ್ಲಿ ಪ್ರತ್ಯೇಕ ನರೇಗಾ ಸಿಬ್ಬಂದಿ ನೀಡಿಲ್ಲ. 10 ಸಾವಿರ ಮಾನವ ದಿನಗಳನ್ನು ಸೃಜಿಸಿದ ಗ್ರಾ.ಪಂ.ಗಳಿಗೆ ನರೇಗಾ ಕೆಲಸಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಿಬ್ಬಂದಿ ನೇಮಕ ಪ್ರಕ್ರಿಯೆ ತುರ್ತಾಗಿ ಆಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್.ಜನಾರ್ದನ ಮರವಂತೆ, ಬೈಂದೂರು ವಲಯ ಅಧ್ಯಕ್ಷ ಪ್ರದೀಪ್ ಕೊಟ್ಟಾರಿ ಹಳ್ಳಿಹೊಳೆ, ಕುಂದಾಪುರ ವಲಯ ಅಧ್ಯಕ್ಷ ರಮೇಶ್ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ ಗಾಣಿಗ ಇದ್ದರು.