ಮಾ.8, 9 ಅಂತರ ರಾಜ್ಯ ಕ್ರೀಡಾಕೂಟ
Thursday, March 6, 2025
ಲೋಕಬಂಧು ನ್ಯೂಸ್
ಉಡುಪಿ: ಹಿರಿಯ ವಕಿಲರಾಗಿದ್ದ ಚೇರ್ಕಾಡಿ ವಿಜಯ್ ಹೆಗ್ಡೆ ಸ್ಮರಣಾರ್ಥ ಅಡ್ವೊಕೇಟ್ಸ್ ವೆಲ್ಫೇರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಅಸೋಸಿಯೇಶನ್ ಆಫ್ ಉಡುಪಿ ಅಡ್ವಕೇಟ್ಸ್ ವತಿಯಿಂದ ಮಾರ್ಚ್ 8 ಮತ್ತು 9ರಂದು ಉಡುಪಿ ಎಂಜಿಎಂ ಮೈದಾನದಲ್ಲಿ ಅಂತರ ರಾಜ್ಯ ಮಟ್ಟದ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್ ಪಂದ್ಯಾಟ ಆಯೋಜಿಸಲಾಗಿದ್ದು, ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ದೇವದಾಸ್ ವಿ. ಶೆಟ್ಟಿಗಾರ್ ಪಂದ್ಯಾಟದ ಮಾಹಿತಿ ನೀಡಿ, ಕ್ರೀಡಾಕೂಟವನ್ನು ಕುಂದಾಪುರ ವಕೀಲರ ಸಂಘದ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದರು.
ಮಾ.8ರಂದು ಬೆಳಗ್ಗೆ 9 ಗಂಟೆಗೆ ಕ್ರೀಡಾಕೂಟವನ್ನು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾ| ವಿಶ್ವನಾಥ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಪ ಲೋಕಾಯುಕ್ತ ನ್ಯಾ| ಬಿ. ವೀರಪ್ಪ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಸಪಾಲ್ ಸುವರ್ಣ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ದಿ.ವಿಜಯ್ ಹೆಗ್ಡೆ ಪತ್ನಿ ವಿಂಧ್ಯಾ ವಿ.ಹೆಗ್ಡೆ, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ, ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿರುವರು ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಮಾ.8ರಂದು ಸಂಜೆ 6.30ಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ವೈದ್ಯೆ ಡಾ.ಶ್ರುತಿ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ವಕೀಲ ಎಂ.ಕೆ.ವಿಜಯ್ ಕುಮಾರ್ ಅಭ್ಯಾಗತರಾಗಿದ್ದು, ಅಧ್ಯಕ್ಷತೆಯನ್ನು ಅಸೋಸಿಯೇಶನ್ ಗೌರವಾಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ವಹಿಸಲಿದ್ದಾರೆ. ದಿ.ವಿಜಯ್ ಹೆಗ್ಡೆ ಪತ್ನಿ ವಿಂಧ್ಯಾ ವಿ.ಹೆಗ್ಡೆ, ಹಿರಿಯ ವಕೀಲರಾದ ಗೀತಾ ಕೌಶಿಕ್, ವಾಣಿ ವಿ. ರಾವ್, ಶ್ಯಾಮಲಾ ಭಂಡಾರಿ ಮತ್ತು ರೇಖಾ ಹೆಗ್ಡೆ ಉಪಸ್ಥಿತರಿರುವರು ಎಂದರು.
ಮಾ.9ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎಚ್.ರತ್ನಾಕರ್ ಶೆಟ್ಟಿ ವಹಿಸಲಿದ್ದಾರೆ. ಮಂಗಳೂರಿನ ಹಿರಿಯ ವಕೀಲ ವಿಕ್ರಮ್ ಹೆಗ್ಡೆ ಮುಖ್ಯ ಭಾಷಣ ಮಾಡಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್ ಮತ್ತು ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಉದ್ಯಮಿ ಡಾ.ಜಯರಾಮ್ ಶೆಟ್ಟಿ ಆಗಮಿಸುವರು.
ದಿ.ಚೇರ್ಕಾಡಿ ವಿಜಯ್ ಹೆಗ್ಡೆ ಪುತ್ರ ವೀರೆನ್ ಹೆಗ್ಡೆ ಅವರನ್ನು ಗೌರವಿಸಲಾಗುವುದು ಎಂದರು.
ತಮಿಳುನಾಡು, ಕೇರಳ, ಮುಂಬಯಿ, ಬಾಂಬೆ, ಪುಣೆ ಸೇರಿದಂತೆ ವಿವಿಧ ರಾಜ್ಯಗಳ ತಂಡ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಕ್ರಿಕೆಟ್‌ನಲ್ಲಿ ಭಾಗವಹಿಸುವ ತಂಡಗಳಿಗೆ 5 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ 1 ಲಕ್ಷ, ದ್ವೀತಿಯ 60 ಸಾವಿರ ಮತ್ತು ಟ್ರೋಫಿ ಒಳಗೊಂಡಿದೆ.
ಮೊದಲ ಸುತ್ತಿನ ಪಂದ್ಯಾಟಗಳಲ್ಲಿ ಸೋತ ತಂಡಗಳಿಗೆ ತಲಾ 10 ಸಾವಿರ ಬಹುಮಾನ ನೀಡಲಾಗುವುದು. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ 20 ಸಾವಿರ ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು.
ವಾಲಿಬಾಲ್'ನಲ್ಲಿ 3 ಸಾವಿರ ಪ್ರವೇಶ ಶುಲ್ಕವಿದೆ. ಪ್ರಥಮ 50 ಸಾವಿರ, ದ್ವೀತಿಯ 25 ಸಾವಿರ, ತೃತೀಯ 15 ಸಾವಿರ, ಚತುರ್ಥ 10 ಸಾವಿರ ಮತ್ತು ಟ್ರೋಫಿ ನೀಡಲಾಗುವುದು.
ಮಹಿಳಾ ದಿನಾಚರಣೆ ಅಂಗವಾಗಿ ತ್ರೋಬಾಲ್ ತಂಡಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಪ್ರಥಮ 30 ಸಾವಿರ, ದ್ವೀತಿಯ 20 ಸಾವಿರ, ತೃತೀಯ 10 ಸಾವಿರ, ಚತುರ್ಥ 7 ಸಾವಿರ ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಖಿಲ್ ಬಿ.ಹೆಗ್ಡೆ, ಖಜಾಂಚಿ ವೈ.ಟಿ.ರಾಘವೇಂದ್ರ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ, ಹಿರಿಯ ವಕೀಲರಾದ ಜಯಪ್ರಕಾಶ್ ಕೆದ್ಲಾಯ, ಗೀತಾ ಕೌಶಿಕ್, ವಾಣಿ ವಿ. ರಾವ್ ಮೊದಲಾದವರಿದ್ದರು.