ಅವೈಜ್ಞಾನಿಕ ನೀತಿಯಿಂದ ಹಂಚಿನ ಕಾರ್ಖಾನೆ ಮುಚ್ಚುವ ಭೀತಿ
Thursday, March 6, 2025
ಲೋಕಬಂಧು ನ್ಯೂಸ್
ಉಡುಪಿ: ಅಧಿಕಾರಿಗಳ ಅವೈಜ್ಞಾನಿಕ ಮಾದರಿಯ ಕಾನೂನುಗಳಿಂದಾಗಿ ಹಂಚಿನ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಿದ್ದು, ಸುಮಾರು 2 ಸಾವಿರ ಕಾರ್ಮಿಕ ಕುಟುಂಬಗಳು ಅತಂತ್ರರಾಗುವ ಆತಂಕದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಹಂಚು ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ್.ಟಿ. ಸೋನ್ಸ್ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆವೆಮಣ್ಣಿನ ಗಣಿಗಾರಿಕೆ ನಡೆಸಲು ಇಲಾಖೆಗಳು ತುಂಬಾ ಸಮಸ್ಯೆ ಮಾಡುತ್ತಿವೆ. ದಶಕಗಳಿಂದ ಇಲ್ಲದ ನಿಯಮ ಹೇರಿ ಕಾರ್ಖಾನೆ ಹಾಗೂ ಕಾರ್ಮಿಕರಿಗೆ ಸಮಸ್ಯೆ ಉಂಟುಮಾಡುತ್ತಿದ್ದಾರೆ.
ಶತಮಾನಗಳಿಂದ ಮಂಗಳೂರು ಹಂಚುಗಳನ್ನು ನಾವು ಈ ಭಾಗದಲ್ಲಿ ತಯಾರಿಸುತ್ತಿದ್ದೇವೆ. ಒಂದು ಕಾಲದಲ್ಲಿ ಮಂಗಳೂರಿನಲ್ಲಿ 80, ಕುಂದಾಪುರದಲ್ಲಿ 17, ಉತ್ತರ ಕನ್ನಡ ಜಿಲ್ಲೆಯಲ್ಲಿ 16 ಕಾರ್ಖಾನೆಗಳು ಕಾರ್ಯಾಚರಿಸುತ್ತಿತ್ತು. ಆದರೆ, ಆವೆಮಣ್ಣಿನ ಕೊರತೆ ಹಾಗು ಕಾರ್ಮಿಕರ ಕೊರತೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಕುಂದಾಪುರದಲ್ಲಿ ಕೇವಲ 9, ಮಂಗಳೂರಿನಲ್ಲಿ 4 ಕಾರ್ಖಾನೆಗಳು ಚಾಲ್ತಿಯಲ್ಲಿವೆ ಎಂದರು.
ಹಂಚಿನ ಕಾರ್ಖಾನೆಗೆ ಬೇಕಾದ ಆವೆಮಣ್ಣನ್ನು ಖಾಸಗಿ ಭೂಮಿಯಿಂದ ಮಾತ್ರ ತೆಗೆಯಲಾಗುತ್ತಿದೆ. ಈವರೆಗೂ ಸರ್ಕಾರಿ ಭೂಮಿಯಿಂದ ಆವೆಮಣ್ನು ತೆಗೆದಿಲ್ಲ. ರಾಯಧನದಿಂದ ಯಾವುದೇ ರಿಯಾಯತಿಯನ್ನು ಪಡೆದಿಲ್ಲ. ಆದರೆ ಏಕಾಏಕಿ ಉಡುಪಿ ಜಿಲ್ಲಾ ಖನಿಜ ಇಲಾಖೆ ಒಟ್ಟು 14 ವಿವಿಧ ಇಲಾಖೆಗಳಿಂದ ಅನುಮತಿಯನ್ನು ಪಡೆದು ಗಣಿಗಾರಿಕೆ ನಡೆಸಿ ಎಂದು ನೀಡಿರುವ ಷರತ್ತು ಅವೈಜ್ಞಾನಿಕ ಎಂದರು.
ಅಧಿಕಾರಿಗಳು ಮರಳು, ಜಲ್ಲಿಕಲ್ಲಿನ ಗಣಿಗಾರಿಕೆಯಂತೆ ಆವೆಮಣ್ಣಿನ ಗಣಿಗಾರಿಕೆಯನ್ನು ಪರಿಗಣಿಸುವುದು ಸರಿಯಲ್ಲ. ಮರಳು ಸಾಗಿಸಲು ಇರುವಂತೆ ಪರ್ಮಿಟ್ ಮಾದರಿ ಅಳವಡಿಸಿಕೊಂಡು ಆವೆಮಣ್ಣನ್ನು ಸಾಗಿಸಲು ಅಸಾಧ್ಯ. ದಿನವೊಂದರಲ್ಲಿ ನೂರಾರು ಲಾರಿಗಳು ಓಡಾಟ ನಡೆಸುತ್ತವೆ.
ಕುಂದಾಪುರ ಭಾಗದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಇರುವ 10 ಕಾರ್ಖಾನೆಗಳಿಗೇ ಮಣ್ಣು ಬರಲು ಅಸಾಧ್ಯ.
ಮಳೆಗಾಲದಲ್ಲಿ ಆವೆಮಣ್ಣು ತೆಗೆಯುವುದು ಕಷ್ಟ. ಹಂಚಿನ ಕಾರ್ಖಾನೆಗಳಿಗೆ ಇಡೀ ವರ್ಷಕ್ಕೆ ಬೇಕಾಗುವ ಆವೆಮಣ್ಣನ್ನು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮಾತ್ರ ಸಂಗ್ರಹಿಸಲು, ತೆಗೆಯಲು ಸಾಧ್ಯ. ಉಳಿದ ತಿಂಗಳಲ್ಲಿ ಮಳೆಯಿಂದಾಗಿ ಆವೆಮಣ್ಣು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಎಂದರು.
ಈ ಬಗ್ಗೆ ಜಿಲ್ಲಾಧಿಕಾರಿಗೆ ಕಳೆದ ಫೆ.25ರಂದು ಲಿಖಿತವಾಗಿ ಮನವಿ ಸಲ್ಲಿಸಿದ್ದೇವೆ. ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾರ್ಮಿಕ ಇಲಾಖೆ ಸಚಿವರು ಮತ್ತು ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಇದುವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಲೀಕರ ಸಂಘದ ಕಾರ್ಯದರ್ಶಿ ಕೆ.ಸೀತಾರಾಮ ನಕ್ಕತ್ತಾಯ, ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ನರಸಿಂಹ, ಕಾರ್ಯದರ್ಶಿ ಎಚ್.ನರಸಿಂಹ, ಸಚಿನ್ ನಕ್ಕತ್ತಾಯ ಇದ್ದರು.