-->
ಕೃಷ್ಣ ಪ್ರೀತಿಗಾಗಿ ಸಮಸ್ತ ಆರಾಧನೆ ಸಮರ್ಪಣೆ

ಕೃಷ್ಣ ಪ್ರೀತಿಗಾಗಿ ಸಮಸ್ತ ಆರಾಧನೆ ಸಮರ್ಪಣೆ

ಲೋಕಬಂಧು ನ್ಯೂಸ್
ಉಡುಪಿ: ಭಾರತ ದೇಶಕ್ಕೆ ಸಂವಿಧಾನ ಇದ್ದಂತೆ ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣನೇ ಸಂವಿಧಾನ. ಇಲ್ಲಿ ನಡೆಯುವ ಎಲ್ಲ ಆರಾಧನೆಗಳೂ ಕೃಷ್ಣ ಪ್ರೀತಿಗಾಗಿ ನಡೆಯುತ್ತವೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಗುರುವಾರ ಶೀರೂರು ಮಠದಲ್ಲಿ ನಡೆದ ಅಕ್ಕಿ ಮುಹೂರ್ತ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಅನ್ನ ಎಂದರೆ ಭಗವಂತ ಎಂಬ ಅರ್ಥವೂ ಇದೆ. ಆತನಿಂದ ಸೃಷ್ಟಿಯಾದ ಜಗತ್ತು ಅತನಿಂದಲೇ ಲಯವಾಗುತ್ತದೆ. ಆದ್ದರಿಂದ ಅನ್ನದಿಂದಲೇ ಆರಂಭ ಮತ್ತು ಅಂತ್ಯ ಎಲ್ಲವೂ ಹೌದು ಎಂದವರು ಪ್ರತಿಪಾದಿಸಿದರು.


ಸಾನ್ನಿಧ್ಯ ವಹಿಸಿದ್ದ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಹಿಂದಿನ ಕಾಲದಲ್ಲಿ ಅಕ್ಕಿಯ ಮೂಲಕವೇ ಆರ್ಥಿಕತೆ ನಡೆಯುತ್ತಿತ್ತು. ಕೃಷ್ಣನ ನೈವೇದ್ಯ ಮತ್ತು ಭಕ್ತರಿಗೆ ಅನ್ನದಾನದ ಜೊತೆಗೆ ಮಠದ ನಿರ್ವಹಣೆಗೂ ಅಕ್ಕಿ ಪೂರಕವಾಗಿತ್ತು.


ಆಚಾರ್ಯ ಮಧ್ವ ಪ್ರತಿಪಾದಿತ ಈ ವ್ಯವಸ್ಥೆಯನ್ನು ಭಾವೀಸಮೀರ ವಾದಿರಾಜರು ಸುವ್ಯವಸ್ಥಿತಗೊಳಿಸಿದರು. ಹಿರಿಯರು ಹಾಕಿಕೊಟ್ಟ ಸಂಪ್ರದಾಯದ ಅನುಸರಣೆ ಅಗತ್ಯ ಎಂದರು.


ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನಿರೀಕ್ಷಿತವಾಗಿ ಲಭಿಸುವುದನ್ನು ಯೋಗ ಎಂದರೆ, ಅದರ ಸದ್ವಿನಿಯೋಗ ಕ್ಷೇಮ ಎಂದೆನಿಸುತ್ತದೆ. ಶೀರೂರು ಶ್ರೀಗಳಿಗೆ ಕೃಷ್ಣ ಪೂಜಾಧಿಕಾರದ ಯೋಗ- ಕ್ಷೇಮಗಳೆರಡೂ ಲಭಿಸಿದೆ ಎಂದರು.


ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.


ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕೃಷ್ಣನ ಆರಾಧನೆಯಿಂದ ದೇಶಕ್ಕೊದಗಿದ ಕ್ಷಾಮಡಾಮರ ತೊಲಗಲಿ ಎಂದು ಆಶಿಸಿದರು.


ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.


ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಧಾರ್ಮಿಕ ಜಾಗೃತಿಯಿಂದ ಸಮಾಜ ನಿರ್ಮಾಣ ಸಾಧ್ಯ. ದೇಶ ಕಟ್ಟುವಲ್ಲಿ ವಾದಿರಾಜರ ಕೊಡುಗೆ ಗಮನೀಯ ಎಂದರು.


ಸಾನ್ನಿಧ್ಯ ವಹಿಸಿದ್ದ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು, ನೈವೇದ್ಯಕ್ಕಾಗಿ ಅಕ್ಕಿ ಸಂಗ್ರಹಣೆಯ ಆಶಯ ಅಕ್ಕಿ ಮುಹೂರ್ತದ್ದಾದರೂ ಹಳೆಯ ಅಕ್ಕಿ ಉಣ್ಣಲು ಉತ್ತಮ ಎಂಬ ಚಿಂತನೆ ಈ ಮುಹೂರ್ತದಲ್ಲಿ ಅಡಗಿದೆ ಎಂದರು.


ಶೀರೂರು ಮಠದ ದಿವಾನ ಉದಯ ಸರಳತ್ತಾಯ, ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್ ಮೊದಲಾದವರಿದ್ದರು. ಅಶ್ವತ್ಥ ಭಾರದ್ವಾಜ ನಿರೂಪಿಸಿದರು.

ಪರ್ಯಾಯ ಶ್ರೀ ಭೇಟಿ
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಆಗಮಿಸಿದರು.
ಅವರಿಗೆ ಮಾಲಿಕಾ ಮಂಗಳಾರತಿ ಸಹಿತ ಮಠೀಯ ಗೌರವ ಸಲ್ಲಿಸಲಾಯಿತು.

Ads on article

Advertise in articles 1

advertising articles 2

Advertise under the article