ಬೂದಿ ಬುಧವಾರ ಆಚರಣೆ ಮೂಲಕ ತಪಸ್ಸಿನ ದಿನಗಳ ಆರಂಭ
Wednesday, March 5, 2025
ಲೋಕಬಂಧು ನ್ಯೂಸ್
ಉಡುಪಿ: ಭಗವಾನ್ ಏಸ್ತುಕ್ರಿಸ್ತನ ಕಷ್ಟಗಳ ಕಾಲವನ್ನು ಸ್ಮರಿಸುವ 40 ದಿನ ತಪಸ್ಸಿನ ಕಾಲ ಬುಧವಾರದಿಂದ ಆರಂಭಗೊಂಡಿದ್ದು, ತಪಸ್ಸು ಕಾಲದ ಆರಂಭದ ದಿನವನ್ನು ವಿಭೂತಿ (ಬೂದಿ) ಬುಧವಾರ (ಆ್ಯಶ್ ವೆಡ್ನೆಸ್ ಡೇ)ವಾಗಿ ಕ್ರೈಸ್ತರು ಆಚರಿಸಿದರು.ಈಸ್ಟರ್ ಹಬ್ಬಕ್ಕೂ ಮೊದಲ ಆರು ವಾರ ಕಾಲ ಆಚರಿಸುವ ಪಶ್ಚಾತ್ತಾಪದ ಕಾಲದ ಮೊದಲ ದಿನವೇ ವಿಭೂತಿ ಬುಧವಾರ.ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಬುಧವಾರ ಬೆಳಿಗ್ಗೆ ಪ್ರಾರ್ಥನಾ ವಿಧಿ ಜರುಗಿದ್ದು, ಧರ್ಮಗುರುಗಳು ಭಕ್ತರ ಹಣೆಗೆ ಆಶೀರ್ವದಿಸಿದ ಬೂದಿ (ವಿಭೂತಿ)ಯನ್ನು ಹಚ್ಚಿ, ಧೂಳಿನಿಂದ ಬಂದ ಮನುಷ್ಯ ಮರಳಿ ಧೂಳಿಗೆ ಎಂಬ ವಾಕ್ಯವನ್ನು ಪುನರುಚ್ಚರಿಸುವ ಮೂಲಕ ಕ್ರಿಸ್ತರ ಕಷ್ಟ ಕಾಲವನ್ನು ಸ್ಮರಿಸಿದರು.
ಪಾಪದ ಜೀವನ ತೊರೆದು ಕ್ರಿಸ್ತರ ಹಾದಿ ತುಳಿಯಲು, ಅವರ ಅನುಯಾಯಿಗಳಾಗಲು ಕರೆ ನೀಡಿದರು.
ಮುಂದಿನ ಸುಮಾರು 40 ದಿನಗಳ ಕಾಲ ಏಸುಕ್ರಿಸ್ತರ ಕಷ್ಟ ಕಾಲವನ್ನು ಕ್ರೈಸ್ತರು ಸ್ಮರಿಸುತ್ತಾರೆ.
ಮಾನವ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪದ ಗುರುತಾಗಿ ಶಿರಗಳಿಗೆ ವಿಭೂತಿ ಹಚ್ಚಿ ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ಮನಃಪರಿವರ್ತನೆಯೊಂದಿಗೆ ಪ್ರಭು ಏಸುವಿನ ಪುನರುತ್ಥಾನದಲ್ಲಿ ಪಾಲ್ಗೊಳ್ಳುವುದೇ ತಪಸ್ಸಿನ ಕಾಲದ ಉದ್ದೇಶ. ತಪಸ್ಸು ಕಾಲವನ್ನು ಶ್ರದ್ಧೆಯಿಂದ ಆಚರಿಸಿ ಪಾಪ ಪರಿಹಾರದೊಂದಿಗೆ ನವವ್ಯಕ್ತಿಗಳಾಗಿ ಪ್ರಭು ಕ್ರಿಸ್ತರ ಕಷ್ಟ, ಯಾತನೆ, ಮರಣ ಹಾಗೂ ಪುನರುತ್ಥಾನವನ್ನು ಧ್ಯಾನಿಸುವುದೇ ತಪಸ್ಸು ಕಾಲದ ಪ್ರಮುಖ ಗುರಿ.
40 ದಿನಗಳ ಕಾಲ ಆಚರಿಸುವ ತಪಸ್ಸು ಕಾಲದಲ್ಲಿ ಕ್ರೈಸ್ತರು ಶಿಲುಬೆಯ ಹಾದಿಯ ಮೂಲಕ ಕ್ರಿಸ್ತರ ಕಷ್ಟಗಳ ಸ್ಮರಣೆ, ಕೆಲವು ದಿನಗಳ ಕಾಲ ಉಪವಾಸವಿದ್ದು, ಮಾಂಸಾಹಾರ ತ್ಯಜಿಸಿ ತ್ಯಾಗ, ಪ್ರಾರ್ಥನೆ, ದಾನಗಳ ಮೂಲಕ ತಮ್ಮ ಅಚರಣೆಯನ್ನು ಅರ್ಥಪೂರ್ಣವಾಗಿಸುತ್ತಾರೆ.
ತಪಸ್ಸು ಕಾಲದ ಉಪವಾಸ ಪಾಪ ನಿವೇದನೆಯೊಂದಿಗೆ ದೇಹ ದಂಡನೆ ಮಾಡುವುದಾಗಿದೆ. ತನ್ನಲ್ಲಿ ಇದ್ದುದನ್ನು ತ್ಯಾಗ ಮಾಡಿ, ಉಳಿಸಿದ್ದನ್ನು ಬಡವರೊಂದಿಗೆ ಹಂಚಿಕೊಳ್ಳುವುದಾಗಿದೆ. ದ್ವೇಷ ತೊರೆದು ರಾಜೀ ಸಂಧಾನಕ್ಕೆ ಹೆಚ್ಚಿನ ಒತ್ತುನೀಡಿದ್ದಲ್ಲಿ ಮಾತ್ರ ಆಚರಿಸಿದ ತಪಸ್ಸು ಕಾಲ ಫಲಪ್ರದ ವಾಗುವುದು.
ದೇವರ ಚಿತ್ತಕ್ಕೆ ತಲೆಬಾಗುವುದೇ ಪ್ರಾರ್ಥನೆ. ನಮಗೆ ನೀಡಿರುವುದರಿಂದ ಇತರರೊಂದಿಗೆ ಹಂಚಿಕೊಳ್ಳುವುದು ನಿಜವಾದ ದಾನಧರ್ಮ. ಉಪವಾಸ ಬರೀ ಊಟದಿಂದ ದೂರವಿಡುವುದು ಮಾತ್ರವಲ್ಲ ಬದಲಾಗಿ ದುಶ್ಚಟ, ಕೆಟ್ಟ ಮಾತು, ದುರಭ್ಯಾಸಗಳಿಂದ ದೂರವಿರುವುದು. ಪ್ರಮುಖವಾಗಿ ದ್ವೇಷವನ್ನು ಹಿಂಸೆಯನ್ನು ತ್ಯಜಿಸುವುದೇ ನಿಜವಾದ ತಪಸ್ಸು ಕಾಲವಾಗಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಸಂದೇಶ ನೀಡಿದ್ದಾರೆ.