-->
ಇಂದ್ರಾಳಿ ಮೇಲ್ಸೇತುವೆ ಶೀಘ್ರ ಪೂರ್ಣಗೊಳಿಸಿ, ತಪ್ಪಿದಲ್ಲಿ ಕ್ರಮಕ್ಕೆ ಸಿದ್ಧರಾಗಿ

ಇಂದ್ರಾಳಿ ಮೇಲ್ಸೇತುವೆ ಶೀಘ್ರ ಪೂರ್ಣಗೊಳಿಸಿ, ತಪ್ಪಿದಲ್ಲಿ ಕ್ರಮಕ್ಕೆ ಸಿದ್ಧರಾಗಿ

ಲೋಕಬಂಧು ನ್ಯೂಸ್
ಉಡುಪಿ: ಜಿಲ್ಲೆಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳದೇ ಸಾರ್ವಜನಿಕರಿಗೆ ಹೆಚ್ಚಿನ ಅನನುಕೂಲ ಉಂಟಾಗುತ್ತಿದೆ. ಕಾಮಗಾರಿ ವೇಗವನ್ನು ಹೆಚ್ಚಿಸಲು, ನಿರಂತರ ಅನುಸರಣೆ ಮಾಡಿದರೂ ಸಹ ಕುಂಠಿತಗೊಳ್ಳುತ್ತಿದೆ. ಕಾಮಗಾರಿಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಪ್ರಗತಿ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ 2018ರಿಂದಲೇ ಪ್ರಾರಂಭವಾದರೂ ಈವರೆಗೂ ಪೂರ್ಣಗೊಂಡಿಲ್ಲ. ಅದರಿಂದಾಗಿ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ಜೊತೆಗೆ ಅನೇಕ ಅಪಘಾತಗಳು, ಸಾವು ನೋವುಗಳಾಗಿವೆ. ಸಾರ್ವಜನಿಕರು ಆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವೆಲ್ಲವುಗಳಿಗೂ ಜಿಲ್ಲಾಡಳಿತ ಉತ್ತರ ನೀಡಬೇಕಾಗಿದೆ.


ಆದರೆ, ಕಾಮಗಾರಿಯ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಸಾಗದೇ ಪೂರ್ಣಗೊಂಡಿದಿಲ್ಲ. ಕಳೆದ ಆರು ತಿಂಗಳಿನಿಂದ ನಾವು ನಿರಂತರವಾಗಿ ಸಭೆ ಹಾಗೂ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರೂ ಕಾಮಗಾರಿ ವೇಗ ಕಾಣುತ್ತಿಲ್ಲ. ಅಭಿಯಂತರರು ಹಾಗೂ ಗುತ್ತಿಗೆದಾರರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.


ಕಾಮಗಾರಿಯ ಪ್ರಗತಿಯ ವೇಗವನ್ನು ಹೆಚ್ಚಿಸಿ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ಕಾನೂನು ರೀತಿಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಈಗಾಗಲೇ ಕಬ್ಬಿಣದ ಗರ್ಡಲ್ಸ್ ಫ್ಯಾಬ್ರಿಕೇಷನ್ ವರ್ಕ್ ಪೂರ್ಣಗೊಂಡಿದೆ. ಅವುಗಳ ಇನ್ಸ್ಫೆಕ್ಷನ್ ಕಾರ್ಯಗಳನ್ನು ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜಂಟಿಯಾಗಿ ಕೈಗೊಂಡು ಗುಣಮಟ್ಟ ಪರೀಕ್ಷಿಸಬೇಕು ಎಂದ ಅವರು, ಕಬ್ಬಿಣದ ಗರ್ಡಲ್ಸ್'ಗಳನ್ನು ಸೇತುವೆಯಾಗಿ ಅಳವಡಿಸಲು ಅಗತ್ಯವಿರುವ ಎಲ್ಲಾ ರೀತಿಯ ಪೂರ್ವ ತಯಾರಿಗಳನ್ನು ಈಗಿನಿಂದಲೇ ಜೊತೆ ಜೊತೆಯಾಗಿ ಕೈಗೊಳ್ಳಬೇಕು ಎಂದು ಅಭಿಯಂತರರಿಗೆ ಸೂಚಿಸಿದರು.


ರಾಷ್ಟ್ರೀಯ ಹೆದ್ದಾರಿ 169ಎಯ ಕರಾವಳಿ ಬೈಪಾಸ್'ನಿಂದ ಮಲ್ಪೆ ವರೆಗಿನ ರಸ್ತೆ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ತ್ವರಿತವಾಗಿ ಕೈಗೊಳ್ಳಬೇಕು. ವಿದ್ಯುತ್ ಕಂಬಗಳ ಬದಲಾವಣೆ ಕಾರ್ಯವನ್ನು ಆದಷ್ಟು ತ್ವರಿತವಾಗಿ ಕೈಗೊಳ್ಳಬೇಕು. ಆಸ್ತಿಯ ಮಾಲೀಕರು ಅದಕ್ಕೆ ಸಹಕರಿಸಬೇಕು.


ಭೂ ಸ್ವಾಧೀನ ಪರಿಹಾರ ಹಣವನ್ನು ಮುಂಚಿತವಾಗಿಯೇ ಠೇವಣಿ ಇಡಬೇಕು ಎಂದ ಅವರು, ಕಾಮಗಾರಿ ಕೈಗೊಳ್ಳುವಲ್ಲಿ ಯಾವುದೇ ರೀತಿಯ ಅಡಚಣೆಗಳು ಉಂಟಾದಲ್ಲಿ ಪೊಲೀಸ್ ಇಲಾಖೆಯ ನೆರವು ಪಡೆಯಬೇಕು ಎಂದರು.


ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆ-ಅಂಬಲಪಾಡಿಯ ಅಂಡರ್ ಪಾಸ್ ರಸ್ತೆ ಕಾಮಗಾರಿಯನ್ನು ಇನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಮಳೆಗಾಲ ಪ್ರಾರಂಭವಾಗಿ ಕಾಮಗಾರಿಗೆ ಅಡಚಣೆಗಳಾಗುವ ಸಾಧ್ಯತೆ ಇದೆ ಎಂದರು.


ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಸಹಾಯಕ ಕಮೀಷನರ್ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಶೃಂಗೇರಿ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಗುತ್ತಿಗೆದಾರರು ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article