ಕೊಲಿಜಿಯಂ ವ್ಯವಸ್ಥೆಗೆ ನನ್ನ ಧಿಕ್ಕಾರ ಇದೆ
Saturday, March 8, 2025
ಲೋಕಬಂಧು ನ್ಯೂಸ್
ಉಡುಪಿ: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರೇ ಮಾಡಿಕೊಂಡಿರುವ ಕೊಲಿಜಿಯಂ ವ್ಯವಸ್ಥೆಗೆ ನನ್ನ ಧಿಕ್ಕಾರವಿದೆ. ಈ ವ್ಯವಸ್ಥೆಯ ಬದಲು ಸಂವಿಧಾನಬದ್ದವಾಗಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೂ ಪ್ರಾತಿನಿಧ್ಯ ದೊರಕುವಂತೆ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆ ನಡೆಯಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನ್ಯಾ| ನಾಗಮೋಹನದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2022ರಿಂದ 2025ರ ವರೆಗೆ ಸುಪ್ರೀಂ ಕೋರ್ಟ್‌ಗೆ ಆಯ್ಕೆಯಾದ 18 ನ್ಯಾಯಮೂರ್ತಿಗಳಲ್ಲಿ ಒಬ್ಬರೇ ಒಬ್ಬರು ಮಹಿಳೆಯರಿಲ್ಲ. ಈ ವ್ಯವಸ್ಥೆ ಬದಲಾಗಬೇಕು. ಸಾಮರ್ಥ್ಯ ಇಲ್ಲದೇ ಮಹಿಳೆಯರು ನ್ಯಾಯಮೂರ್ತಿಯಾಗಿ ಆಯ್ಕೆಯಾಗದೇ ಇರುವುದಲ್ಲ, ಅವರನ್ನು ಆಯ್ಕೆ ಮಾಡುವ ಮನಸ್ಥಿತಿ ಇಲ್ಲದೇ ಈ ರೀತಿ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಲಿಜಿಯಂ ವ್ಯವಸ್ಥೆಯಿಂದ ಸದ್ಬಳಕೆ ಹಾಗು ದುರ್ಬಳಕೆ ಆಗಿದೆ. ಆದರೆ, ನ್ಯಾಯಾಧೀಶರ ಶಿಫಾರಸಿನ ಮೇಲೆ ಇತರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರನ್ನು ಆಯ್ಕೆ ಮಾಡುವುದು ಎಷ್ಟು ಸರಿ? ಈ ವ್ಯವಸ್ಥೆಯಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿರುವ ಪ್ರತಿಭಾವಂತರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನಲ್ಲಿ ನ್ಯಾಯಾಧೀಶರಾಗುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದರು.
ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯೂ ಒಂದೆರಡು ಪ್ರಾಂತಕ್ಕೆ ಸೀಮಿತವಾಗದೇ, ದೇಶವ್ಯಾಪಿ ಆಗಬೇಕು. ಹೀಗಾಗಬೇಕೆಂದರೆ ಸಂವಿಧಾನ ಬದ್ದವಾದ, ಸೂಕ್ತ ಮಾರ್ಗದರ್ಶಿ ಹೊಂದಿರುವ ವ್ಯವಸ್ಥೆ ಬರಬೇಕು ಎಂದರು.
ಯುವ ಪೀಳಿಗೆ ಸೇರಿದಂತೆ ಸಾರ್ವಜನಿಕರಿಗೆ ಸಂವಿಧಾನದ ಮೌಲ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂವಿಧಾನ ಓದು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಸಮಾಜಮುಖಿ ಸಂಘಟನೆಗಳೊಂದಿಗೆ ಸೇರಿಕೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಸಂವಿಧಾನ ಬದಲಾಯಿಸಲು ಅವಕಾಶವಿಲ್ಲ, ತಿದ್ದುಪಡಿ ಮಾಡಬಹುದು. ಅದರ ಬಗ್ಗೆ ಕೇಶವಾನಂದಭಾರತಿ ಮತ್ತು ಕೇರಳ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದರು.