.jpg)
ಕಾಪು ಮಾರಿಯಮ್ಮ ಕ್ಷೇತ್ರ ಭಕ್ತರ ರಾಜಾಶ್ರಯದ ತಾಣ
Monday, March 3, 2025
ಲೋಕಬಂಧು ನ್ಯೂಸ್
ಕಾಪು: ಕೆಳದಿ ಅರಸರ ಕಾಲದಲ್ಲಿ ಕಾಪುವಿಗೆ ದಂಡಿನ ಮಾರಿಯಾಗಿ ಬಂದ ಮಾರಿ, ಈಗ ಮಾರಿಯಮ್ಮ ದೇವಿಯಾಗಿ ಸ್ವರ್ಣ ಗದ್ದುಗೆಯಲ್ಲಿ ನೆಲೆನಿಂತು ಅನುಗ್ರಹಿಸುವ ಸಂದರ್ಭಕ್ಕೆ ನಾವು ಸಾಕ್ಷಿಗಳಾಗುತ್ತಿರುವುದು ಹೆಮ್ಮೆಯ ಸಂಗತಿ. ಕಾಪು ಮಾರಿಯಮ್ಮನ ಸನ್ನಿಧಿ ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರ ರಾಜಾಶ್ರಯದ ತಾಣವಾಗಿ ಮೂಡಿಬಂದಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಾರ್ಚ್ 2ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ತಾಯಿಯ ಪ್ರೇರಣೆ
ಅಭ್ಯಾಗತರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಕಾಪು ಮಾರಿಗುಡಿಯ ಜೀರ್ಣೋದ್ಧಾರ ಕೆಲಸಗಳು, ಇಲ್ಲಿನ ಬ್ರಹ್ಮಕಲಶೋತ್ಸವದಲ್ಲಿ ಸೇರಿರುವ ಜನಸ್ತೋಮ, ಭಾಗವಹಿಸುತ್ತಿರುವ ಜನರ ಶ್ರದ್ದೆ, ಭಾವನೆಗಳು ವಿಸ್ಮಯವೆಂಬಂತೆ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಇಷ್ಟೊಂದು ದೊಡ್ಡ ಭವ್ಯ ಮಾರಿಗುಡಿ ನಿರ್ಮಾಣ ಮತ್ತು ನಡೆಯುತ್ತಿರುವ ಕಾರ್ಯಕ್ರಮಗಳ ಯಶಸ್ಸಿಗೆ ತಾಯಿಯ ಪ್ರೇರಣೆಯೇ ಮುಖ್ಯ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಎಂ.ಆರ್. ಜಿ. ಗ್ರೂಪ್ಸ್ ಸಿಎಂಡಿ ಡಾ.ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಇದು ನಮ್ಮ ಜೀವನದಲ್ಲಿ ಸಿಕ್ಕಿದ ಶ್ರೇಷ್ಠ ಅವಕಾಶ. ಕಾಪುವಿನ ಅಮ್ಮನ ಕೃಪೆ ಮತ್ತು ಅಮ್ಮನ ಮಕ್ಕಳ ಸಹಕಾರದಿಂದ ಪ್ರಥಮ ಹಂತದ ಯೋಜನೆಗಳು ಪೂರ್ಣಗೊಂಡಿವೆ. ದ್ವಿತೀಯ ಮತ್ತು ತೃತೀಯ ಹಂತದ ಯೋಜನೆಗಳನ್ನೂ ಶೀಘ್ರ ಪೂರ್ಣಗೊಳಿಸುವ ಸಂಕಲ್ಪ ಸಮಿತಿಯದ್ದಾಗಿದೆ ಎಂದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ವೇ.ಮೂ. ಅನಂತಪದ್ಮನಾಭ ಆಸ್ರಣ್ಣ, ನಾಗಾನಂದ ವಾಸುದೇವ ಆಚಾರ್ಯ ಕಕ್ಕುಂಜೆ, ದ.ಕ. ಸಂಸದ ಕ್ಯಾ.ಬೃಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜ, ಡಾ.ವೈ.ಭರತ್ ಶೆಟ್ಟಿ ಮತ್ತು ಕಿಶೋರ್ ಬಿ.ಆರ್., ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉದ್ಯಮಿ ಮಹೇಶ್ ಕುಮಾರ್, ಮುಂಬಯಿ ಉದ್ಯಮಿ ಕೃಷ್ಣ ವೈ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅದಾನಿ ಸಮೂಹ ಸಂಸ್ಥೆಗಳ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ, ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಿರ್ಡಿ ಸಾಯಿಬಾಬಾ ಮಂದಿರದ ಟ್ರಸ್ಟಿ ಬಿಪಿನ್ ದಾದ ಪುಲೆ, ಸಿಎ ಎಂ. ಬಿ. ಶೆಟ್ಟಿ ಮುಂಬಯಿ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ದಾನಿಗಳನ್ನು ಸಮ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಉಪಸ್ಥಿತರಿದ್ದರು.
ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿ, ಕರ್ನೂರು ಮೋಹನ್ ರೈ ವಂದಿಸಿದರು.