.jpg)
ಸ್ವರ್ಣ ಗದ್ದುಗೆಯಲ್ಲಿ ಮಾರಿಯಮ್ಮ, ಉಚ್ಚಂಗಿ ದೇವಿ ಪ್ರತಿಷ್ಠೆ
Sunday, March 2, 2025
ಲೋಕಬಂಧು ನ್ಯೂಸ್
ಕಾಪು: ಸುಮಾರು 65 ಕೋಟಿ ರೂ. ವೆಚ್ಚದಲ್ಲಿ ಇಳಕಲ್ ಕುಂಕುಮ ಶಿಲೆಯ ಉಭಯ ಗರ್ಭಗುಡಿಗಳ ಸಹಿತ ಸಂಪೂರ್ಣ ಪುನರ್ ನಿರ್ಮಾಣಗೊಂಡಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನೂತನ ದೇಗುಲದಲ್ಲಿ ಶ್ರೀ ಮಾರಿಯಮ್ಮ ಮತ್ತು ಶ್ರೀ ಉಚ್ಚಂಗಿ ದೇವಿಯರ ಪ್ರತಿಷ್ಠೆ ಮಾರ್ಚ್ 2ರಂದು ನಡೆಯಿತು.
ಕೊರಂಗ್ರಪಾಡಿ ವೇ.ಮೂ. ಕೆ.ಜಿ. ರಾಘವೇಂದ್ರ ತಂತ್ರಿ ಮಾರ್ಗದರ್ಶನದಲ್ಲಿ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ದೇವಳದ ಪ್ರಧಾನ ಆರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಹಾಗೂ ವೈದಿಕ ವೃಂದದವರು ಬೆಳಿಗ್ಗೆ 11.05ರ ವೃಷಭ ಲಗ್ನ ಸುಮುಹೂರ್ತದಲ್ಲಿ ಭಕ್ತಾದಿಗಳ ಸ್ವರ್ಣ ಕಾಣಿಕೆ ಮೂಲಕ ನಿರ್ಮಾಣಗೊಂಡಿರುವ ಸುಮಾರು 15 ಕೋಟಿ ರೂ. ವೆಚ್ಚದ ಗದ್ದಿಗೆ (ಮಹಾಸ್ವರ್ಣ ಪೀಠ)ಯಲ್ಲಿ ವ್ಯಸ್ತಾಂಗಸಮಸ್ತನ್ಯಾಸ ಪೂರ್ವಕ ಶ್ರೀ ಮಾರಿಯಮ್ಮನ ಪ್ರತಿಷ್ಠೆ ಹಾಗೂ ಶ್ರೀ ಉಚ್ಚಂಗಿದೇವಿಯ ಸ್ವರ್ಣಪೀಠದೊಂದಿಗೆ ವ್ಯಸ್ತಾಂಗಸಮಸ್ತ ನ್ಯಾಸಪೂರ್ವಕ ಶ್ರೀ ಉಚ್ಚಂಗಿ ದೇವಿಯ ಪ್ರತಿಷ್ಠೆ ನೆರವೇರಿಸಿದರು.ನಿದ್ರಾಕಲಶಾಭಿಷೇಕ, ಜೀವಕುಂಭಾಭಿಷೇಕ, ಮಹಾಪೂಜೆ ನಡೆಸಲಾಯಿತು.
ಬೆಳಿಗ್ಗೆ 8 ಗಂಟೆಯಿಂದ ಹೇರಂಭ ಗಣಪತಿ ಮಂತ್ರಯಾಗ, ಪ್ರತಿಷ್ಠಾಪನಾಂಗ ಪ್ರತ್ಯಕ್ಷ ಗೋದಾನ, ಮೇಧಾಸಾಮ್ರಾಜ್ಯಪ್ರದ ಕಾಳೀಸಹಸ್ರನಾಮಯಾಗ, ಮಧುರಪ್ರದ ಮಧುರಫಲ ಚಂಡೀಯಾಗ, ಪಂಚ ದುರ್ಗಾಮಂತ್ರಯಾಗ, ಆವಹಂತೀ ಸೂಕ್ತಯಾಗ, ವಾಗಂಭ್ರಣೀಸೂಕ್ತಯಾಗ, ಪ್ರಾಸಾದ ಪ್ರತಿಷ್ಠಾ, ಸ್ವರ್ಣಶಿಖರ ಪ್ರತಿಷ್ಠಾ ಜೀವಕುಂಭೋತ್ಥಾಪನ ಅನುಷ್ಠಾನಗಳನ್ನು ನಡೆಸಲಾಯಿತು.
ಸಂಜೆ 4.30ರಿಂದ ಭದ್ರಕಾಳೀ ಕುರುಜಿತರ್ಪಣ, ವಾಕ್ ಪ್ರದ ವಾಗ್ಗೇವೀ ಮಂಡಲಪೂಜಾ, ಸೌಭಾಗ್ಯಪ್ರದ ಶ್ರೀ ಮಹಾಲಕ್ಷ್ಮೀ ಪೂಜಾ, ಚಂಡಿಕಾದಳಾನುಷ್ಠಾನ ಮಂಡಲ ಪೂಜಾ, ದಶವಿಧ ಲಿಪಿದೇಮಾಮಾತೃಕಾಮಂಡಲಾರಾಧನ, ವನದುರ್ಗಾದೇವಿ ದೀಪನಮಸ್ಕಾರ, ಮಹಾಮಾರೀಹರ ಚಂಡೀಪುರಶ್ಚರಣಮ್, ಅಪರಾಜಿತಾಕಲಾ ಮಾತೃಕಾಮಂಡ ಲಾರ್ಚನಮ್, ಶ್ರೀಚಂಡಿಕಾಹೃದ ಯಾನುಷ್ಠಾನಮ್, ಸಾನಿಧ್ಯಪ್ರದ ಕ್ರಿಯಾದಿಗಳು ನಡೆದವು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮೂಳೂರು ಸುಧಾಕರ್ ಹೆಗ್ಡೆ, ರವಿ ಸುಂದರ್ ಶೆಟ್ಟಿ, ಅನಿಲ್ ಬಲ್ಲಾಳ್, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್.ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಗಂಗಾಧರ ಸುವರ್ಣ, ಮನೋಹರ್ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಉದಯ್ ಸುಂದರ್ ಶೆಟ್ಟಿ, ಭಗವಾನ್‌ದಾಸ್ ಶೆಟ್ಟಿಗಾರ್, ಯೋಗೀಶ್ ವಿ. ಶೆಟ್ಟಿ ಮತ್ತು ರಮೇಶ್ ಹೆಗ್ಡೆ, ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ ಮೊದಲಾದವರಿದ್ದರು.