ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಬ್ರಹ್ಮಗಿರಿ ನಿವಾಸಿ, ಖ್ಯಾತ ಮನೋರೋಗ ತಜ್ಞ ಡಾ.ಕೆ.ಹರಿದಾಸ ಸರಳಾಯ (72 ವ.) ಹೃದಯಾಘಾತದಿಂದ ಡಿ.7ರಂದು ಭಾನುವಾರ ನಿಧನ ಹೊಂದಿದರು.
ಮೂಲತಃ ಕನರಾಡಿಯವರಾದ ಅವರು ಇತ್ತೀಚೆಗೆ ನವೀಕರಣಕೊಂಡ ಪ್ರಾಚೀನ ಕೊಡಂಗಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪವಿತ್ರಪಾಣಿಯಾಗಿದ್ದರು.
ಮಣಿಪಾಲ ಕೆಎಂಸಿಯಲ್ಲೇ ಮಕ್ಕಳ ವೈದ್ಯ ಶಾಸ್ತ್ರ (ಪೀಡಿಯಾಟ್ರಿಕ್ಸ್) ಎಂ.ಡಿ. ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದ ಅವರು, ಭಾರತೀಯ ಸೇನೆಯಲ್ಲಿ ಮಕ್ಕಳ ವೈದ್ಯರಾಗಿ 15 ವರ್ಷ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ಪುನಃ ಮನೋರೋಗ (ಸೈಕಿಯಾಟ್ರಿಕ್ಸ್ ) ಎಂ.ಡಿ. ಪದವಿ ಪಡೆದು ಮಣಿಪಾಲ ಕೆಎಂಸಿಯಲ್ಲಿ ಅನೇಕ ವರ್ಷ ಕಾಲ ಪ್ರಾಧ್ಯಾಪಕ ಮತ್ತು ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ನೀಲಾವರ ಗೋಶಾಲೆ , ಉಡುಪಿಯ ಆಸುಪಾಸಿನ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಹಾಗೂ ಅನೇಕ ಧಾರ್ಮಿಕ ಚಟುವಟಿಕೆಗಳಿಗೆ ನಿರಂತರ ಆರ್ಥಿಕ ನೆರವು ನೀಡುತ್ತಿದ್ದರು.
ಮೃತರು ಸಹೋದರನನ್ನು ಅಗಲಿದ್ದಾರೆ.
ಪೇಜಾವರ ಶ್ರೀ ಸಂತಾಪ
ದೈವಭಕ್ತರೂ ಧರ್ಮನಿಷ್ಠರೂ ಆಗಿದ್ದ ಡಾ.ಹರಿದಾಸ ಸರಳಾಯ ಅವರು ಗೋ ಸೇವಾ ಕಾರ್ಯಗಳು ಮತ್ತು ಧರ್ಮ ಕಾರ್ಯಗಳಿಗೆ ನೀಡುತ್ತಿದ್ದ ನೆರವು ಹಾಗೂ ಅವರ ಮೌನ ಸೇವೆ ಸ್ಮರಣೀಯ. ಅವರಿಗೆ ಭಗವಂತ ಸದ್ಗತಿಯನ್ನು ಕರುಣಿಸಲಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ಸಂದೇಶ ನೀಡಿದ್ದಾರೆ.
