-->
ಬುದ್ಧನ ಆಚಾರ ವಿಚಾರ ದಿನನಿತ್ಯ ಅಳವಡಿಸಿಕೊಳ್ಳಿ

ಬುದ್ಧನ ಆಚಾರ ವಿಚಾರ ದಿನನಿತ್ಯ ಅಳವಡಿಸಿಕೊಳ್ಳಿ

ಲೋಕಬಂಧು ನ್ಯೂಸ್
ಉಡುಪಿ: ಭಗವಾನ್ ಬುದ್ಧ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ಹಾಗೂ ತತ್ವಗಳನ್ನು ಅನುಸರಿಸುವುದರೊಂದಿಗೆ ಅವನ ಜೀವನ ಚರಿತ್ರೆ ಮತ್ತು ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಪಾಲಿಸಬೇಕು ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಸೋಮವಾರ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಜನತಾ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಸಂಯುಕ್ತ ಆಶ್ರಯಲ್ಲಿ ನಡೆದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


ಮಾನವತಾವಾದಿ ಸಂದೇಶ ಸಾರುವ ಮೂಲಕ ವಿಶ್ವದಲ್ಲೇ ಖ್ಯಾತಿ ಪಡೆದವರು ಭಗವಾನ್ ಬುದ್ಧ. ಗೌತಮ ಬುದ್ದರ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆ ಸಂದೇಶಗಳನ್ನು ಯುವ ಪೀಳಿಗೆ ಪಾಲಿಸುವಂತಾಗಬೇಕು. ಬುದ್ಧನ ಪ್ರಮುಖ ಬೋಧನೆಗಳಲ್ಲಿ ಸಕಲ ಜೀವಿಗಳಿಗೂ ಸಹಾನುಭೂತಿ ತೋರಿಸಬೇಕು, ಸ್ವಾತಂತ್ರ್ಯ ನೀಡಬೇಕು ಎನ್ನುವುದು ಒಂದಾಗಿದೆ.


ಬುದ್ಧನ ತತ್ವಗಳು ಜಾತಿ, ವರ್ಣ, ವರ್ಗದ ವಿರುದ್ಧವಾಗಿದ್ದವು. ಸಾಮಾನ್ಯ ಜನರ ಜೊತೆಗೆ ಜೀವನ ನಡೆಸಿದ ಅವರು, ಮಾನವ ದೃಷ್ಟಿಕೋನದಿಂದಲೇ ಜನರ ದುಃಖವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದರು ಎಂದರು.


ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ ಭಗವಾನ್ ಬುದ್ಧ ಆತ್ಮ, ತತ್ವಗಳ ಬಗ್ಗೆ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ಜ್ಞಾನಮಾರ್ಗವನ್ನು ಅನುಸರಿಸಿ ನಮ್ಮೊಳಗೆ ಜಾಗೃತಿಯನ್ನು ಮೂಡಿಸಿಕೊಂಡು ಸಮಾಜ ಸುಧಾರಣೆ ಮಾಡುವಲ್ಲಿ ಶ್ರಮಿಸಬೇಕು ಎಂದರು.


ಬುದ್ಧನ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ವಕೀಲ ಮಂಜುನಾಥ್ ವಿ., ಮೌಢ್ಯವನ್ನು ನಿರಾಕರಿಸಿ ಸತ್ಯವನ್ನು ಅನುಸರಿಸುವ ಮೂಲಕ ನೇರವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಬೋಧಿಸಿದ ಗೌತಮ ಬುದ್ದ, ಸಮಾಜದಲ್ಲಿ ಶಾಂತಿ ಸಹಬಾಳ್ವೆಯ ಜೀವನ ನಿರ್ವಹಣೆಯ ತತ್ವವನ್ನು ಜಗತ್ತಿಗೆ ಸಾರಿದರು ಎಂದರು.


ಇದೇ ಸಂದರ್ಭದಲ್ಲಿ ಬುದ್ಧನ ಕುರಿತಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.


ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಮೊದಲಾದವರಿದ್ದರು.



ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಮಹೇಶ್ ಮಾರ್ಪಳ್ಳಿ ನಿರೂಪಿಸಿದರು. ರಾಘವೇಂದ್ರ ವಂದಿಸಿದರು.

Ads on article

Advertise in articles 1

advertising articles 2

Advertise under the article