ಮಳೆಗಾಲದ ಪ್ರಾಕೃತಿಕ ವಿಕೋಪಗಳಿಗೆ ತಕ್ಷಣ ಸ್ಪಂದಿಸಲು ಸನ್ನದ್ಧರಾಗಿ
Monday, May 12, 2025
ಲೋಕಬಂಧು ನ್ಯೂಸ್
ಉಡುಪಿ: ಜಿಲ್ಲೆಯಲ್ಲಿ ಮುಂಬರುವ ಮಳೆಗಾಲದಲ್ಲಿ ಹೆಚ್ಚು ಮಳೆಯಿಂದಾಗಿ ಉಂಟಾಗುವ ಪ್ರಾಕೃತಿಕ ವಿಕೋಪಗಳ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಲು ಅಗತ್ಯ ತಯಾರಿಯೊಂದಿಗೆ ಮುಂಚಿತವಾಗಿಯೇ ಯೋಜನೆ ರೂಪಿಸಿಕೊಂಡು, ಕೂಡಲೇ ಸ್ಪಂದಿಸಲು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಚ್ಚಾಗಿ ಕೃತಕ ನೆರೆ ಉಂಟಾಗಿ ಮನೆಗಳು ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿ ಉಂಟಾಗುತ್ತದೆ. ಕಳೆದ ಮಳೆಗಾಲದಲ್ಲಿ ಇಂಥ ಪ್ರಕರಣಗಳುಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಈ ಬಾರಿ ಹಾಗಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಾಜ ಕಾಲುವೆ, ತೋಡುಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಲು ಈಗಾಗಲೇ ಸೂಚಿಸಲಾಗಿದೆ. ಆದರೂ ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಕೂಡಲೇ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು.
ನದಿಯಲ್ಲಿ ಹೂಳು ತುಂಬಿದ ಕಾರಣ ಕೆಲವು ಭಾಗಗಳಲ್ಲಿ ನೀರು ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾನಿ ಉಂಟಾಗುತ್ತದೆ. ಆ ಬಗ್ಗೆ ರೈತರು ಅದರ ತೆರವಿಗೆ ಮನವಿ ಮಾಡಿದ್ದಾರೆ. ತೆರವು ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು. ಆ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಂಥವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಎಫ್.ಐ.ಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಳೆ ನೀರು ಕೊಯ್ಲನ್ನು ಸರ್ಕಾರಿ ಹಾಗೂ ಖಾಸಗಿ ಬೋರ್ ವೆಲ್ ಹಾಗೂ ತೆರೆದ ಬಾವಿಗಳಿಗೆ ಅಳವಡಿಸುವಂತೆ ಕಳೆದ ಸಾಲಿನಲ್ಲಿ ಸೂಚನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 1,616 ತೆರೆದ ಬಾವಿಗಳು ಹಾಗೂ 1,554 ಕೊಳವೆ ಬಾವಿಗಳಿದ್ದು, ಅನುಕ್ರಮವಾಗಿ 44 ಹಾಗೂ 93 ಬಾವಿಗಳಿಗೆ ಮಾತ್ರ ಮಳೆ ನೀರು ಕೊಯ್ಲು ಅಳವಡಿಸಲಾಗಿದೆ. ಅವುಗಳನ್ನು ಆದ್ಯತೆಯ ಮೇಲೆ ಕೂಡಲೇ ಅಳವಡಿಸಬೇಕೆಂದು ಸೂಚನೆ ನೀಡಿದರು. ಖಾಸಗಿಯವರೂ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ಅದರಿಂದ ಅಂತರ್ಜಲ ಹೆಚ್ಚುವ ಜೊತೆಗೆ ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಿಸಲು ಸಾಧ್ಯ ಎಂದರು.
ಮಳೆಯಿಂದ ಉಂಟಾದ ಕಟ್ಟಡದ ಹಾನಿ, ರಸ್ತೆ ಕಾಮಗಾರಿ ಕೈಗೊಳ್ಳಲು ಈಗಾಗಲೇ ಅನುದಾನ ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಶಾಲಾ ಕಾಲೇಜುಗಳ ಕಟ್ಟಡಗಳನ್ನು ಪರೀಕ್ಷಿಸಿ, ಅವುಗಳು ಸರಿ ಇರುವ ಬಗ್ಗೆ ದೃಢೀಕರಣ ಪತ್ರವನ್ನು ಅಭಿಯಂತರರಿಂದ ಪಡೆಯಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರಬೇಕು. ಈ ಸಮಿತಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಮಹಿಳೆಯರನ್ನೂ ಸಮಿತಿಯ ಸದಸ್ಯರನ್ನಾಗಿಸಬೇಕು.
ಯಾವುದೇ ವಿಪತ್ತು ಸಂಭವಿಸಿದಲ್ಲಿ ಗ್ರಾಮಲೆಕ್ಕಿಗರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಸ್ಪಂದಿಸಲು ಮುಂದಾಗಬೇಕು. ಮರಣ ಸಂಭವಿಸಿದಲ್ಲಿ 24 ಗಂಟೆ ಒಳಗಾಗಿ ಅವರಿಗೆ ಪರಿಹಾರ ಒದಗಿಸಲು ಕಾರ್ಯಪ್ರವೃತ್ತರಾಗಿರಬೇಕು ಎಂದರು.
ಸಭೆಯಲ್ಲಿ ಸಹಾಯಕ ಕಮೀಷನರ್ ರಶ್ಮಿ ಎಸ್., ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕು ತಹಶೀಲ್ದಾರರು, ಇ.ಓಗಳು ಮೊದಲಾದವರಿದ್ದರು.