ರಕ್ತ ಮತ್ತು ನೀರು ಒಮ್ಮೆಗೇ ಹರಿಯದು
Monday, May 12, 2025
ಲೋಕಬಂಧು ನ್ಯೂಸ್
ನವದೆಹಲಿ: ಆಪರೇಷನ್ ಸಿಂದೂರ ಕೇವಲ ಹೆಸರಲ್ಲ, ನ್ಯಾಯದ ಅಖಂಡ ಪ್ರತಿಜ್ಞೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ದೇಶವನ್ನುದ್ದೇಶಿಸಿ ಸೋಮವಾರ ಮಾತನಾಡಿ, ಪಹಲ್ಗಾಮ್‌ನಲ್ಲಿ ಧರ್ಮವನ್ನು ಕೇಳಿ ಅಮಾಯಕರನ್ನು ಕೊಂದಿದ್ದಾರೆ. ಹೆಂಡತಿ, ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ. ಭಾರತದ ಹೆಣ್ಣು ಮಕ್ಕಳ ಸಿಂದೂರ ಅಳಿಸಿದವರನ್ನು ಮಟ್ಟ ಹಾಕಿದ್ದೇವೆ. ಉಗ್ರವಾದಿಗಳು ಅದನ್ನು ಕನಸಿನಲ್ಲೂ ಊಹಿಸಿರಲಿಲ್ಲ. ಉಗ್ರರನ್ನು ಸರ್ವನಾಶ ಮಾಡಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಯಿತು.
ಭಯೋತ್ಪಾದಕರನ್ನು ಮಟ್ಟ ಹಾಕಲು ಭಾರತಕ್ಕೆ ಸಹಕರಿಸುವ ಬದಲು ಪಾಕಿಸ್ತಾನ ನಮ್ಮ ಮೇಲೆಯೇ ದಾಳಿ ಮಾಡಲು ಪ್ರಯತ್ನಿಸಿತು. ಪಾಕಿಸ್ತಾನ ಉಗ್ರರಿಗೆ ಬೆಂಬಲ ಕೊಡುತ್ತಿದೆ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಭಾರತದ ಗುರುದ್ವಾರ, ಶಾಲಾ ಕಾಲೇಜು, ಮಂದಿರ ಹಾಗೂ ಜನಸಾಮಾನ್ಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪಾಕ್ ಮುಂದಾಯಿತು. ಆದರೆ, ಅದರಲ್ಲೂ ಪಾಕ್ ವಿಫಲವಾಯಿತು.
ಪಾಕಿಸ್ತಾನದ ಡ್ರೋನ್ ಹಾಗೂ ಕ್ಷಿಪಣಿಗಳು ಭಾರತೀಯ ಸೇನೆ ಹೊಡೆದುರುಳಿಸಿದೆ. ಅಲ್ಲದೆ, ಉಗ್ರರು ಅಡಗಿದ್ದ ಸ್ಥಳಗಳನ್ನು ಧ್ವಂಸ ಮಾಡಲಾಗಿದೆ. ಈ ಆಪರೇಷನ್ ಸಿಂದೂರ ದೇಶದ ಪ್ರತೀ ತಾಯಿ, ಸಹೋದರಿಗೆ ಅರ್ಪಣೆ. ದೇಶದ ಸಶಸ್ತ್ರ ಪಡೆಗಳಿಗೆ ದೊಡ್ಡ ಸಲ್ಯೂಟ್ ಮಾಡುತ್ತೇನೆ. ಆಪರೇಷನ್ ಸಿಂದೂರ ಯಶಸ್ವಿಯಾಗಿದೆ ಎಂದರು.
ರಕ್ತ ಮತ್ತು ನೀರು ಒಮ್ಮೆಗೇ ಹರಿಯದು ಎಂದ ಮೋದಿ, ಯುದ್ಧ ಅಂತ್ಯವಲ್ಲ ಎಂದು ಎಚ್ಚರಿಸಿದರು.