ಇಎಸ್ಐ ವೇತನ ಮಿತಿ ಹೆಚ್ಚಳಕ್ಕೆ ಆಗ್ರಹ
Wednesday, May 28, 2025
ಲೋಕಬಂಧು ನ್ಯೂಸ್, ಉಡುಪಿ
ಇ.ಎಸ್.ಐ ಆರೋಗ್ಯ ವಿಮೆ ವೇತನ ಮಿತಿ ಪ್ರಸ್ತುತ ಇರುವ 21 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಿಸಲು ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಕ್ ಮಾಂಡವೀಯ ಅವರಿಗೆ ಸಂಸದ ಕೋಟ ಬುಧವಾರ ಮನವಿ ಮಾಡಿದರು.ಇ.ಎಸ್.ಐ ಕೇಂದ್ರ ಪ್ರಾಯೋಜಿತ ಆರೋಗ್ಯ ವಿಮೆಯಾಗಿದ್ದು ಇಪ್ಪತ್ತೊಂದು ಸಾವಿರದೊಳಗೆ ವೇತನ ಪಡೆಯುವ ಸಿಬ್ಬಂದಿಗಳಿಗೆ ಸೀಮಿತವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ವೇತನ ಪರಿಷ್ಕರಣೆ ಮಾಡಿದ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಕಾರ್ಮಿಕರು ಹೆಚ್ಚು ವೇತನ ಪಡೆಯುತ್ತಿರುವುದರಿಂದ ವೇತನದ ಮಿತಿಯನ್ನು 21 ಸಾವಿರದಿಂದ 30 ಸಾವಿರಕ್ಕೆ ಏರಿಸಬೇಕೆಂದು ಮನವಿ ಮಾಡಿದರು.
ಬ್ರಹ್ಮಾವರದಲ್ಲಿ ಪ್ರಸ್ತಾವಿತ ಇ.ಎಸ್.ಐ ಆಸ್ಪತ್ರೆಯನ್ನು ಶೀಘ್ರ ಪ್ರಾರಂಭಿಸಲು ಆಗ್ರಹಿಸಿದರು.
ಸಂಸದರ ಮನವಿ ಪರಿಶೀಲಿಸಿದ ಕೇಂದ್ರ ಸಚಿವ ಮಾಂಡವೀಯ, ಇ.ಎಸ್.ಐ ಮೊತ್ತ ಪರಿಷ್ಕರಣೆ ಹಾಗೂ ಬ್ರಹ್ಮಾವರ ಆಸ್ಪತ್ರೆ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.