
ನಾಡಿನುದ್ದಕ್ಕೂ ಬುದ್ಧನ ಬೆಳಕು ಹರಡಲಿ
Monday, May 12, 2025
ಲೋಕಬಂಧು ನ್ಯೂಸ್
ಉಡುಪಿ: ಬುದ್ಧನ ತತ್ವ ಆದರ್ಶಗಳು, ಪ್ರಜ್ಞೆ, ಶೀಲ, ಕರುಣೆಯಿಂದ ಕೂಡಿದೆ. ಆ ಕಾರಣಕ್ಕಾಗಿ ಬೌದ್ಧ ಧರ್ಮ ಜಗತ್ತಿಗೆ ಶಾಂತಿ, ಸಮಾನತೆ, ಸಹೋದರತೆ ಭ್ರಾತೃತ್ವ ಬಿತ್ತುವ ಕಲೆಹೊಂದಿದೆ. ಇವತ್ತಿನ ಎಲ್ಲಾ ತಲ್ಲಣಗಳಿಗೆ ಉತ್ತರವಾಗಬೇಕಾದರೆ ನಾಡಿನುದ್ದಕ್ಕೂ ಬುದ್ಧನ ಬೆಳಕು ಹರಡಬೇಕಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ಬುದ್ಧ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಇಂದು ಭಾರತ ಮತ್ತು ಪಾಕಿಸ್ಥಾನದ ನಡುವೆ ದಾಳಿ ನಡೆಯುತ್ತಿದೆ. ನಮ್ಮೆದುರಿಗಿರುವ ಬುದ್ಧ ಮತ್ತು ಯುದ್ಧ ಎಂಬ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾದರೆ ನಾವು ಯಾವುದನ್ನು ಆಯ್ಕೆ ಮಾಡಬೇಕು ಎಂದ ಜಯನ್ ಮಲ್ಪೆ, ಜೀವ ಜಗತ್ತಿನ ಬಗ್ಗೆ ಕಿಂಚಿತ್ತಾದರೂ ಪ್ರೀತಿಯುಳ್ಳ ಮನುಷ್ಯ ವರ್ಗ ಬುದ್ಧ ಮತ್ತು ಬುದ್ದನ ವಿಚಾರಗಳನ್ನು ಅಪ್ಪಿಕೊಳ್ಳದೇ ಬೇರೆ ದಾರಿ ಕಾಣುವುದಿಲ್ಲ. ಬುದ್ದನ ಶಾಂತಿ ಮಂತ್ರವೇ ಭೂಮಿಯ ಮೇಲಿನ ಜೀವಸಂಕುಲದ ಉಳಿವಿಗೆ ರಕ್ಷಾಕವಚವಾಗಬಲ್ಲದು ಎಂದರು.
ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಸಮಕಾಲೀನ ಜಾಗತಿಕ ಘಟನೆಗಳಿಗೆ, ಹಿಂಸೆಯ ಪ್ರಚೋದನೆ, ಭಯೋತ್ಪಾದನೆ, ಭ್ರಷ್ಟಾಚಾರ, ಅನೈತಿಕ ರಾಜಕಾರಣ, ಕೋಮುದ್ವೇಷ ಮುಂತಾದವುಗಳಿಗೆ ಪ್ರತಿರೋಧವೊಡ್ಡಲು ಬುದ್ಧನನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.
ಅಂಬೇಡ್ಕರ್ ಯುವಸೇನೆ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ ಭವಿಷ್ಯದಲ್ಲಿ ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ಸಾಕಾರಗೊಳ್ಳಬೇಕಾದರೆ ದಲಿತರು ಅಂಬೇಡ್ಕರ್ ಅವರನ್ನು ತಮ್ಮ ಸಂಕುಚಿತ ಸ್ವಾರ್ಥಕ್ಕೆ ಸಾಧನವಾಗಿ ಬಳಸುವುದನ್ನು ಬಿಟ್ಟು ಧಮ್ಮ ಚಳವಳಿಯನ್ನು ಮುನ್ನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ದಲಿತ ಮುಖಂಡರಾದ ದಯಾಕರ ಮಲ್ಪೆ, ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಗುಣವಂತ ತೊಟ್ಟಂ, ದೀಪಕ್ ಕೊಡವೂರು, ಸತೀಶ್ ಕಪ್ಪೆಟ್ಟು, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ನವೀನ್ ಬನ್ನಂಜೆ, ಸಕಿ ಕುಮಾರ್ ಕಪ್ಪೆಟ್ಟು, ಮಾಸ್ಟರ್ ಹಷೀಲ್ ಮುಂತಾದವರಿದ್ದರು.
ಸಮಾರಂಭದ ಬಳಿಕ ಮಲ್ಪೆ ಸುತ್ತಮುತ್ತಲಿನ ದಲಿತ ಕಾಲೋನಿಯ ಅನೇಕ ಮಂದಿ ಗೌತಮ ಬುದ್ಧನಿಗೆ ಹೂವು ಗುಚ್ಚ ಅರ್ಪಿಸಿ ವಂದನೆ ಸಲ್ಲಿಸಿದರು.
ವಿನಯ ಕೊಡಂಕೂರು ಸ್ವಾಗತಿಸಿ, ಸಂತೋಷ್ ಮೂಡುಬೆಟ್ಟು ವಂದಿಸಿದರು.