.jpg)
ಶರಣಾಗತಿಯ ಭಾವವಿದ್ದಾಗ ಸಮಸ್ಯೆಯಿಂದ ಪಾರು
Tuesday, June 17, 2025
ಲೋಕಬಂಧು ನ್ಯೂಸ್, ಉಡುಪಿ
ಮನುಷ್ಯನಿಗೆ ಯಾವುದೇ ಸಮಸ್ಯೆ, ಕಷ್ಟ, ನೋವು, ವಿಕಲ್ಪಗಳಿಂದ ತೊಂದರೆಯಾದಾಗ ಭಗವಂತನ ನಾಮಸ್ಮರಣೆ, ಅವನಲ್ಲಿ ನಿಷ್ಕಳಂಕ ಭಕ್ತಿ ಹಾಗೂ ಪೂರ್ಣ ಶರಣಾಗತಿಯ ಭಾವವಿದ್ದಾಗ ಭವಸಾಗರದ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು. ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಬಹುದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹೇಳಿದರು.
ಮನೆ ಮನೆ ಭಾಗವತ ಪ್ರವಚನ ಅಭಿಯಾನ ಅಂಗವಾಗಿ ಕೊಡವೂರಿನ ಜನಾರ್ದನ ಕೊಡವೂರು ಹಾಗೂ ಪೂರ್ಣಿಮಾ ಜನಾರ್ದನ್ ದಂಪತಿ ಮನೆ `ಭಾಮಾ'ದಲ್ಲಿ ನರಸಿಂಹ ಅವತಾರದ ಶ್ರೇಷ್ಠತೆ ಬಗ್ಗೆ ಪ್ರವಚನ ನೀಡಿದರು.ಶ್ರೀಪಾದರು ತಮ್ಮ 70ರ ಜನ್ಮ ನಕ್ಷತ್ರ ಸಂದರ್ಭದಲ್ಲಿ 1008 ಮನೆಗಳಲ್ಲಿ ಭಾಗವತ ಪ್ರವಚನ ಅಭಿಯಾನ ಪರಿಕಲ್ಪನೆಗೆ ನಾಂದಿ ಹಾಡಿದ್ದರು. ಇದೀಗ 854ಕ್ಕೂ ಅಧಿಕ ಮನೆಗಳಲ್ಲಿ ಭಾಗವತ ಪ್ರವಚನ ನಡೆಸಿಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾಗವತ ಪ್ರವಚನ ಯೋಜನೆ ಹಮ್ಮಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮಠದ ಅನುಯಾಯಿಗಳಾದ ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಪ್ರಸಾದ ಪಾಡಿಗಾರ್, ಶ್ರೀನಿವಾಸ ಬಾದ್ಯ, ಜಯರಾಮ ಆಚಾರ್ಯ, ಚಂದ್ರಶೇಖರ್ ಆಚಾರ್ಯ, ರಾಜೇಶ್ ಉಪಾಧ್ಯ ಮೊದಲಾದವರಿದ್ದರು.