.jpg)
ರಕ್ತದಾನದಿಂದ ಕಾಯಿಲೆಗಳು ದೂರ
Tuesday, June 17, 2025
ಲೋಕಬಂಧು ನ್ಯೂಸ್, ಉಡುಪಿ
ರಕ್ತದಾನ ಶ್ರೇಷ್ಠ ದಾನವಾಗಿದ್ದು, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಅದನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ. ವ್ಯಕ್ತಿ ಪ್ರತೀ ಮೂರು ತಿಂಗಳಿಗೊಮ್ಮೆ ಒಂದು ಬಾರಿ ರಕ್ತದಾನ ಮಾಡಿದ್ದಲ್ಲಿ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುವುದರೊಂದಿಗೆ ಹೃದಯಾಘಾತ, ಕ್ಯಾನ್ಸರ್, ಹೃದಯ ರೋಗಗಳು ಮತ್ತಿತರ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಜಿ.ಹುಬ್ಬಳ್ಳಿ ಹೇಳಿದರು.
ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ರಕ್ತನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಉಡುಪಿ, ಯೂತ್ ರೆಡ್ ಕ್ರಾಸ್, ರೋಟರ್ಯಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಜೆಸಿಐ ಅಲೂಮಿನಿ ಕ್ಲಬ್ ವಲಯ 15 ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪಘಾತ ಹಾಗೂ ಇನ್ನಿತರ ಕಾಯಿಲೆಗಳಿಂದ ಪ್ರಾಣಾಪಾಯದಲ್ಲಿರುವ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು.
ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಪ್ರತಿದಿನ ಸೂಕ್ತ ಗುಂಪಿನ ರಕ್ತದ ಕೊರತೆಯಿಂದ ಹಾಗೂ ಅಪಘಾತದಲ್ಲಿ ತೀವ್ರ ತರಹದ ಗಾಯದಿಂದ ರಕ್ತಸ್ರಾವವಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆ ಇದ್ದು, ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ರಕ್ತದಾನದಂಥ ಮಹತ್ವಪೂರ್ಣ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು.
ಯುವ ಜನತೆ ಸ್ವಯಂಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಮಾತನಾಡಿ, ಉಡುಪಿ ರಕ್ತದಾನಿಗಳ ಜಿಲ್ಲೆ ಎಂದು ಗುರುತಿಸಲ್ಪಟ್ಟಿದೆ. ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಜನರು ರಕ್ತದಾನ ಮಾಡಲು ಮುಂದೆ ಬರುತ್ತಾರೆ. ನಮ್ಮ ಜಿಲ್ಲೆಯಿಂದ ನೆರೆಯ ಜಿಲ್ಲೆಯವರೂ ರಕ್ತ ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳು ಜೀವನದಲ್ಲಿ ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ.ಮಮತಾ ಕೆ.ವಿ., ಸಮಾಜ ಸೇವೆಯಲ್ಲಿ ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್.ವಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ಲಕ್ಷ್ಮೀಶ ಉಡುಪ, ರೂಪ ಬಲ್ಲಾಳ್, ಕಾರ್ತಿಕ್ ನಾಯ್ಕ್ ಹಾಗೂ ಗಿರಿಜ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾಕುಮಾರಿ, ಜೆಸಿಐ ಅಲೂಮಿನಿ ಕ್ಲಬ್ ಅಧ್ಯಕ್ಷೆ ಆಶಾ ಅಲೆನ್ ವಾಝ್ ಇದ್ದರು.
ಡಾ.ವಿದ್ಯಾಲಕ್ಷ್ಮೀ ಸ್ವಾಗತಿಸಿ, ಜಿಲ್ಲಾ ಕಾರ್ಯಕ್ರಮ ಮೇಲ್ವಿಚಾರಕ ಮಹಾಬಲೇಶ್ವರ ನಿರೂಪಿಸಿದರು. ಯೂತ್ ರೆಡ್ ಕ್ರಾಸ್ ಸಹಾಯಕ ಡೀನ್ ಯೋಗೀಶ್ ಆಚಾರ್ಯ ವಂದಿಸಿದರು.