.jpg)
ಅತಿಸಾರ ಭೇದಿಯಿಂದ ಮಕ್ಕಳ ಮರಣ ಪ್ರಮಾಣ ಶೂನ್ಯಕ್ಕಿಳಿಸಿ
Tuesday, June 17, 2025
ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲೆಯಾದ್ಯಂತ ಜುಲೈ 31ರ ವರೆಗೆ ನಡೆಯುವ ತೀವ್ರತರ ಅತಿಸಾರ ಭೇದಿ ಕೊನೆಗೊಳಿಸುವ ಅಭಿಯಾನದಲ್ಲಿ 0-5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರಲು ಮುಂದಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಜಿ.ಹುಬ್ಬಳ್ಳಿ ಕರೆ ನೀಡಿದರು.
ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸಂಯುಕ್ತ ಆಶ್ರಯದಲ್ಲಿ ನಡೆದ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಅಭಿಯಾನದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆರು ಮತ್ತು ಆರೋಗ್ಯ ಸಿಬ್ಬಂದಿ 0-5 ವರ್ಷದೊಳಗಿನ ಮಕ್ಕಳಿರುವ ಮನೆಗಳನ್ನು ಭೇಟಿ ಮಾಡಿ, ಎರಡು ಓ.ಆರ್.ಎಸ್ ದ್ರಾವಣದ ಪ್ಯಾಕ್ ಹಾಗೂ 14 ಝಿಂಕ್ ಮಾತ್ರೆಗಳನ್ನು ವಿತರಿಸಲಿದ್ದಾರೆ. ಜೊತೆಗೆ ಕೈತೊಳೆಯುವ ವಿಧಾನ, ಓ.ಆರ್.ಎಸ್ ದ್ರಾವಣ ತಯಾರಿ ಕುರಿತು ತಾಯಂದಿರಿಗೆ ಮಾಹಿತಿ ನೀಡಲಿದ್ದಾರೆ.
ಮಕ್ಕಳಲ್ಲಿ ಅತಿಸಾರದಿಂದ ಉಂಟಾಗುವ ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಈ ಅಭಿಯಾನ ಸಹಕಾರಿಯಾಗಲಿದೆ ಎಂದರು.
ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದಾಗ ಓ.ಆರ್.ಎಸ್ ದ್ರಾವಣ ಹಾಗೂ ಝಿಂಕ್ ಮಾತ್ರೆ ನೀಡುವುದರಿಂದ ನಿರ್ಜಲೀಕರಣ ತಡೆಗಟ್ಟುವುದರೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿ, ಮಕ್ಕಳು ವೇಗವಾಗಿ ಚೇತರಿಕೆ ಕಂಡುಕೊಳ್ಳುತ್ತಾರೆ. ತೀವ್ರ ನಿರ್ಜಲೀಕರಣ ಇರುವ ಪ್ರಕರಣಗಳಿದ್ದಲ್ಲಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಅಮರನಾಥ ಶಾಸ್ತ್ರಿ ಕಾರ್ಯಕ್ರಮದ ಮಾಹಿತಿ ನೀಡಿ, ಬೇಸಿಗೆಯ ಕೊನೆಯಲ್ಲಿ ಹಾಗೂ ಮಳೆಗಾಲದ ಪ್ರಾರಂಭದಲ್ಲಿ ಸಾಮಾನ್ಯವಾಗಿ 0-5 ವರ್ಷದ ಮಕ್ಕಳಲ್ಲಿ ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ವಾಂತಿ ಭೇದಿಯಂಥ ಪ್ರಕರಣಗಳು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. ಅಂಥ ಅಪಾಯಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ.
ಸಾರ್ವಜನಿಕರು ಹಾಗೂ ಪೋಷಕರು ಪರಿಸರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮಕ್ಕಳಿಗೆ ಕುದಿಸಿ ಆರಿಸಿದ ನೀರನ್ನು ಕುಡಿಯಲು ನೀಡಬೇಕು. ಆಗ ಮಾತ್ರ ರೋಗಗಳಿಂದ ದೂರ ಉಳಿಯಲು ಸಾಧ್ಯ ಎಂದರು.
ಜಿಲ್ಲಾ ಸರ್ಜನ್ ಡಾ. ಅಶೋಕ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ತೀವ್ರತರ ಅತಿಸಾರ ಭೇದಿ ಕೊನೆಗೊಳಿಸುವ ಅಭಿಯಾನ ಕುರಿತ ಮಾಹಿತಿ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಜಗೋಪಾಲ್ ಭಂಡಾರಿ, ಪ್ರಸೂತಿ ತಜ್ಞೆ ಡಾ.ಉಷಾ ಭಟ್, ಮಕ್ಕಳ ತಜ್ಞರಾದ ಡಾ.ಸಂದೀಪ್ ಮತ್ತು ಡಾ. ಮಹಾದೇವ ಭಟ್ ಇದ್ದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಜ್ಯೋತ್ಸಾ ಬಿ.ಕೆ. ಸ್ವಾಗತಿಸಿ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ನಿರೂಪಿಸಿದರು. ಪ್ರಭಾರ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.