.jpg)
ಬಡಗಬೆಟ್ಟು ಸೊಸೈಟಿ: ಸಮಾಜಮುಖಿ ಕಾರ್ಯಗಳಿಗೆ ಪ್ರತಿ ವರ್ಷ 25 ಲಕ್ಷ ವಿನಿಯೋಗ
Saturday, July 5, 2025
ಲೋಕಬಂಧು ನ್ಯೂಸ್, ಉಡುಪಿ
ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗಳಿಸಿದ ಲಾಭಾಂಶದಲ್ಲಿ ಸಮಾಜಮುಖಿ ಯೋಜನೆಗಳಿಗೆ ಪ್ರತಿ ವರ್ಷ 25 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 15 ಲಕ್ಷ ರೂ. ಮೊತ್ತದ ಉಚಿತ ನೋಟ್ ಪುಸ್ತಕ ಮತ್ತು ಶೈಕ್ಷಣಿಕ ಪರಿಕರಗಳ ವಿತರಣೆ, ಪ್ರತಿಭಾ ಪುರಸ್ಕಾರ ಹೊಸ ಸಸಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ತಹಶೀಲ್ದಾರ್ ಪಿ.ಗುರುರಾಜ್ ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಮಾತನಾಡಿದರು.
ಉಡುಪಿ ನಗರಸಭೆ ಪರಿಸರ ಅಭಿಯಂತರ ರವಿ ಪ್ರಕಾಶ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್, ಸೊಸೈಟಿ ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಜಯ ಶೆಟ್ಟಿ, ಸದಾಶಿವ ನಾಯಕ್, ಎಲ್.ಉಮಾನಾಥ, ವಿನಯ ಕುಮಾರ್, ಅಬ್ದುಲ್ ರಜಾಕ್ ಮತ್ತು ಜಾರ್ಜ್ ಸ್ಯಾಮ್ಯುಯೆಲ್ ಇದ್ದರು.
ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಹಾಗೂ ತರಬೇತಿದಾರ ಕೆ.ರಾಜೇಂದ್ರ ಭಟ್ ಬೆಳ್ಮಣ್ಣು, ನಿಮ್ಮ ಪ್ರತಿಭೆಯನ್ನೇ ಬಂಡವಾಳವಾಗಿಸಿಕೊಳ್ಳಿ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಸಣ್ಣದಲ್ಲ ದೊಡ್ಡ ಕನಸನ್ನೇ ಕಾಣಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
1,300 ಗಿಡ ನೆಟ್ಟು ಬೆಳೆಸಿದ ಸಾಲು ಮರದ ತಿಮ್ಮಕ್ಕ, ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ, ಶಾಸ್ತ್ರೀಯ ಸಂಗೀತದ ಮೂಲಕ ಸಹಪಾಠಿಯ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾದ ಬಾಲಕಿ ಫಲಕ ಮುಚ್ಚಲು ಸಾಧನೆಯನ್ನು ವಿದ್ಯಾರ್ಥಿಗಳ ಮುಂದೆ ಸೊಗಸಾಗಿ ಪ್ರಸ್ತುತಪಡಿಸಿದರು.
ಅಂತಾರಾಷ್ಟ್ರೀಯ ಸಹಕಾರ ವರ್ಷ 2025 ಅಂಗವಾಗಿ ಏಕ್ ಪೇಡ್ ಮಾ ಕೆ ನಾಮ್ ಧ್ಯೇಯವಾಕ್ಯದಡಿ ಗಿಡ ನೆಡುವ ಸಂಕಲ್ಪ, ಹಸಿರು ಪರಿಸರ ನಿರ್ಮಾಣದ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಹಕಾರ ಇಲಾಖೆ ವತಿಯಿಂದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮೂಲಕ ತಾಯಿ ಹೆಸರಲ್ಲಿ ಮನೆಗೊಂದು ಗಿಡ ಯೋಜನೆಯಡಿ ಒಟ್ಟು ಒಂದು ಲಕ್ಷ ಗಿಡ ನೆಡಲಿದ್ದು, ಗಿಡ ಉತ್ತಮವಾಗಿ ಪೋಷಿಸಿದ ವಿದ್ಯಾರ್ಥಿಗಳಿಗೆ ಬಹುಮಾನವಿದೆ ಎಂದು ಘೋಷಿಸಲಾಯಿತು.
ಶಾಲೆಗಳಿಗೆ 15 ಲಕ್ಷ ರೂ.ಕೊಡುಗೆ
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ, ಹಸಿರು ಜಾಗೃತಿ ಅಂಗವಾಗಿ ಭಿತ್ತಿಪತ್ರ ಅನಾವರಣ, ಶಾಲಾ ಮಕ್ಕಳಿಗೆ ಗಿಡ ವಿತರಣೆ, ಕನ್ನಡ ಮಾಧ್ಯಮದ 35 ಶಾಲಾ ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶಿಕ್ಷಣ ಪರಿಕರ, ಸಮವಸ್ತ್ರ ವಿತರಣೆ ನಡೆಯಿತು.
ಸದಾನಂದ ಎಸ್. ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ನವೀನ್ ಕೆ. ನಿರೂಪಿಸಿದರು. ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ವಂದಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸಹಕರಿಸಿದರು.