-->
ಮಾಧ್ಯಮ ಪಟ್ಟಿಗೆ ಸಮುದಾಯ ಬಾನುಲಿ ಸೇರಿಸಿ

ಮಾಧ್ಯಮ ಪಟ್ಟಿಗೆ ಸಮುದಾಯ ಬಾನುಲಿ ಸೇರಿಸಿ

ಲೋಕಬಂಧು ನ್ಯೂಸ್, ಉಡುಪಿ
ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾನ್ಯತೆ ಮತ್ತು ವಯರ್ಲೆಸ್ ಆಪರೇಟಿಂಗ್ ಲೈಸನ್ಸ್ ಹೊಂದಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಬಾನುಲಿ ಕೇಂದ್ರಗಳ ಪ್ರತಿನಿಧಿಗಳ ತಂಡ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿಯಾಗಿ ಸಮುದಾಯ ಬಾನುಲಿ ಕುರಿತು ವಿವರಿಸಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಮ್ಯುನಿಟಿ ರೇಡಿಯೊ ಅಸೋಸಿಯೇಷನ್ ಅಧ್ಯಕ್ಷೆ ಡಾ.ರಶ್ಮಿ ಅಮ್ಮೆಂಬಳ (ರೇಡಿಯೊ ಮಣಿಪಾಲ್) ಸಮುದಾಯ ಬಾನುಲಿಗಳ ಪ್ರಸ್ತುತ ಸವಾಲುಗಳು, ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಗೆ ವಿವರಿಸಿ ತಳಮಟ್ಟದ ಸಮುದಾಯಗಳ ಧ್ವನಿಯಾಗಿರುವ ಸಮುದಾಯ ಬಾನುಲಿ ಕೇಂದ್ರಗಳು ಕಲೆ, ಸಂಸ್ಕೃತಿ, ಭಾಷೆಯನ್ನು ಸಂರಕ್ಷಿಸುವ ಜೊತೆಗೆ ಶಿಕ್ಷಣ, ಕೃಷಿ, ಆರೋಗ್ಯ, ಪರಿಸರ, ಮಹಿಳಾ ಸಬಲೀಕರಣ ಹಾಗೂ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುತ್ತಾ ಜನಸಾಮಾನ್ಯರನ್ನು ಪರಿಣಾಮಕಾರಿಯಾಗಿ ತಲುಪಿರುವುದನ್ನು ವಿವರಿಸಿದರು.


ಸಮುದಾಯ ಬಾನುಲಿ ಕೇಂದ್ರಗಳು ಸರಕಾರದ ನಿಯಮಾವಳಿಗೆ ಅನುಗುಣವಾಗಿ ಸೀಮಿತ ಪ್ರಸಾರ ವ್ಯಾಪ್ತಿ ಹೊಂದಿವೆ. ರಾಷ್ಟ್ರದ ಮೂಲ ಘಟಕವಾದ ಸಮುದಾಯದ ಅಭಿವೃದ್ಧಿಯ ಆಶಯ ಹೊಂದಿರುವ ಸಮುದಾಯ ಬಾನುಲಿ ಕೇಂದ್ರಗಳು ಇತರ ರಾಷ್ಟ್ರೀಯ ಮಾಧ್ಯಮಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದರಿಂದ ಅವುಗಳಿಗೆ ಸರಕಾರದ ಉತ್ತೇಜನವೂ ಅಗತ್ಯವಿದ್ದು, ಸರಕಾರ ಜಾಹೀರಾತು ನೀತಿಯನ್ನು ಮರು ಪರಿಶೀಲಿಸಿ ಸಮುದಾಯ ಬಾನುಲಿಗಳನ್ನು ಮಾಧ್ಯಮ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಂಡು, ಅದನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.


ಕಮ್ಯುನಿಟಿ  ರೇಡಿಯೊ ಅಸೋಸಿಯೇಷನ್ ದಕ್ಷಿಣ ವಲಯದ ಜಂಟಿ ನಿರ್ದೇಶಕ ಶಿವಶಂಕರ್ (ನಮ್ಮ ಧ್ವನಿ) ಮಾತನಾಡಿ, ದೇಶದಾದ್ಯಂತ ಸುಮಾರು 530 ಸಮುದಾಯ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ ಎಂದರು.


ಮನವಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದರು.


ಕರ್ನಾಟಕ ಕಮ್ಯೂನಿಟಿ ರೇಡಿಯೋ ಅಸೋಸಿಯೇಷನ್‌ನ ಸದಸ್ಯರಾದ ನಿಂಗರಾಜು (ನಮ್ಮ ಧ್ವನಿ), ವಿ.ಕೆ.ಕಡಬ (ರೇಡಿಯೊ ನಿನಾದ), ಜ್ಯೋತಿ ಸಾಲಿಗ್ರಾಮ (ರೇಡಿಯೊ ಕುಂದಾಪುರ), ರೋಶನ್ (ರೇಡಿಯೊ ಸಾರಂಗ್) ಇದ್ದರು.


ಕೆಪಿಸಿಸಿ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್ ಸಹಕರಿಸಿದರು.

Ads on article

Advertise in articles 1

advertising articles 2

Advertise under the article