.jpg)
ಮನೆಗಳಲ್ಲಿ ತುಳು ಭಾಷೆ ಬಳಕೆಯಾಗಲಿ
Monday, July 7, 2025
ಲೋಕಬಂಧು ನ್ಯೂಸ್, ಉಡುಪಿ
ತುಳುನಾಡಿನ ಆಚಾರ ವಿಚಾರ, ಸಂಸ್ಕಾರ ಸಂಸ್ಕೃತಿ ಉಳಿಯಬೇಕಾದರೆ ಮಾತೃಭಾಷೆ ತುಳುವನ್ನು ಪ್ರತೀ ಮನೆ ಮನೆಯಲ್ಲಿ ಬಳಸಬೇಕು. ಆ ಮೂಲಕ ತುಳುನಾಡಿನ ಪ್ರಾಕೃತಿಕ ಸಂಪತ್ತನ್ನು ಪರಿಚಯಿಸಬೇಕು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ತುಳುಕೂಟ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಳುನಾಡ ಧ್ವನಿ ಸಹಯೋಗದೊಂದಿಗೆ ನಡೆದ ಮದರೆಂಗಿದ ರಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಕಾರಯುತ ಜೀವನ ಶೈಲಿಯನ್ನು ಮೂಡಿಸಲು ತುಳುಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದರು.
ಮದರಂಗಿ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತುಳುನಾಡಿನ ಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ಹಿರಿಯರು ಕೆಲಸ ಮಾಡಬೇಕು. ಆ ಮೂಲಕ ಮಕ್ಕಳಲ್ಲಿ ತುಳು ಭಾಷೆಯ ಮಹತ್ವ ತಿಳಿಸಬೇಕು ಎಂದರು.
ಮಲ್ಪೆ ಕಡಲತೀರದ ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರದ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್, ಉದ್ಯಮಿ ಶ್ರುತಿ ಜಿ. ಶೆಣೈ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಎನ್.ಜಿ.ಒ ಬೆಳಪು ಸ್ಥಾಪಕಾಧ್ಯಕ್ಷೆ ಜೇಬಾ ಸೆಲ್ವಾನ್, ಉಡುಪಿ ವಿದ್ಯಾ ಸರಸ್ವತಿ, ಥೀಮ್ ಬೊಟಿಕ್ ಸ್ಥಾಪಕಿ ರೇಷ್ಮಾ ತೋಟಾ, ಭುವನಪ್ರಸಾದ್ ಹೆಗ್ಡೆ, ತುಳುಕೂಟ ಉಡುಪಿ ಕಾರ್ಯದರ್ಶಿ ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಚಾಲಕಿ ಯಶೋದಾ ಕೇಶವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃತಿ ಮೂಡುಬೆಟ್ಟು ನಿರೂಪಿಸಿದರು.
ತುಳುನಾಡಿನ ಜಾನಪದ ಕಸಬುಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.